ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್‌ಗೆ ಕಂಪ್ಲಿಯಲ್ಲಿ ತೀವ್ರ ಖಂಡನೆ
ಕಂಪ್ಲಿ 12: ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಶಾಂತಿಯುತ ಹೋರಾಟ ನಡೆಸುತ್ತಿರುವವರ ಮೇಲೆ ಸರಕಾರ ಲಾಟಿಚಾರ್ಜ್ ಮಾಡಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಎಸ್.ಚಂದ್ರಶೇಖರಗೌಡ ಗುಡುಗಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಗ್ರಹಿಸಿ, ಲಿಂಗಾಯಿತ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಹೋರಾಟವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ದುರುದ್ದೇಶದಿಂದ ಲಾಠಿ ಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ನೂರಕ್ಕೂ ಹೆಚ್ಚು ಹೋರಾಟಗಾರರ ಜೀವನ ಚಿಂತಾ ಜನಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಕೋಟ್ಯಾಂತರ ಜನರು ದುಃಖವನ್ನು ಅನುಭವಿಸುತ್ತಿದ್ದಾರೆ. ಹೋರಾಟಗಾರರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆಯನ್ನು ಸಮಸ್ತ ಬಳ್ಳಾರಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ.
ಈ ಹಿಂದೆ 12ನೇ ಶತಮಾನದಲ್ಲಿ ಮಂತ್ರಿ ಕೊಂಡಿಮಂಚಣ್ಣ ಲಿಂಗಾಯತರ ಮೇಲೆ ಹತ್ಯೆ ಮಾಡಿಸಿದ್ದರು. ಅದೇ ರೀತಿಯಾಗಿ ಇಂದು 21ನೇ ಶತಮಾನದಲ್ಲಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಕ್ಷಾಂತರ ಪಂಚಮಸಾಲಿಗಳ ಮೇಲೆ ಗುಂಡಾಗಿರಿ ಹಾಗೂ ಲಾಠಿ ಚಾರ್ಜ್ ಮಾಡಿಸಿ ನಮ್ಮ ರಕ್ತ ಹರಿಸಿದ್ದಾರೆ. ಇಂತಹ ಕ್ರೂರ ಕೃತ್ಯಕ್ಕೆ ಕಡಿವಾಣ ಹಾಕಬೇಕು. ಹಾಗೂ ಲಿಂಗಾಯತರ ಹೋರಾಟ ಹತ್ತಿಕ್ಕುವ ಹುನ್ನಾರದ ರೂವಾರಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಪಂಚಮಸಾಲಿಗಳು ತಕ್ಕ ಉತ್ತರ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ವಕೀಲರ ಮೇಲೆ ಹಾಗೂ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಸರ್ಕಾರದ ಧೋರಣೆಯು ಸರಿಯಲ್ಲ ಸ್ವತಃ ಲಾಠಿ ಹಿಡಿದುಕೊಂಡು ಸ್ವ-ಹಿತಾಸಕ್ತಿ ತೋರಿ ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸ್ ಮಹಾ ನಿರ್ದೇಶಕ (ಎ.ಡಿ.ಜಿ.ಪಿ) ಆರ್.ಹಿತೇಂದ್ರರವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಗೂಂಡಾವರ್ತನೆ ಸರಕಾರ ಮತ್ತು ಸಿದ್ದರಾಮಯ್ಯನವರು ಮುಂದುವರೆಯಲು ಅನಹ್ರರು.
ಈ ಇಬ್ಬರನ್ನು ಕೂಡಲೇ ವಜಾಗೊಳಿಸಬೇಕೆಂದು ಇಡೀ ಸಮಾಜದ ಪರವಾಗಿ ಮನವಿ ಮಾಡಿಕೊಳ್ಳಲಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಸಮಾಜದ ಹಾಗೂ ನಮ್ಮ ಜಗದ್ಗುರುಗಳ ಕ್ಷಮೆ ಕೇಳಬೇಕು ಈ ಕುತಂತ್ರ ರಾಜಕಾರಣಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ ಪಂಚಮಸಾಲಿಗಳ ಹಾಗೂ ರೈತರ ಮೇಲೆ ಹಾಕಿರುವ ಎಫ್‌ಐಆರ್ ಕೇಸ್‌ನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ನಂತರ ತಹಶೀಲ್ದಾರ್ ಶಿವರಾಜ ಶಿವಪುರಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಳ್ಳಳ್ಳಿ ವಿರೇಶ, ಶರಣಪ್ಪಗೌಡ, ಓಂಕಾರಗೌಡ, ಬಳೆ ಮಲ್ಲಿಕಾರ್ಜುನ, ಬಿ.ವಿ.ಗೌಡ, ಎಚ್.ರಾಜಶೇಖರಗೌಡ, ಕನಕಗಿರಿ ರೇಣುಕಾಗೌಡ, ಎ.ನಾಗರಾಜಗೌಡ, ಕಂತೆಗೌಡ, ಶಶಿಧರ ಸೇರಿದಂತೆ ಅನೇಕರಿದ್ದರು.