ಭೂರಹಿತ ಮಾಜಿ ದೇವದಾಸಿಯರ ಸಬಲೀಕರಣಕ್ಕೆ ಜಮೀನು ಹಂಚಿಕೆಗೆ ಕ್ರಮ: ಜಿಲ್ಲಾಧಿಕಾರಿ ಸುನೀಲ ಕುಮಾರ

ಕೊಪ್ಪಳ 08: ಭೂರಹಿತ ದೇವದಾಸಿಯರ ಸಬಲೀಕರಣಕ್ಕೆ ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಜಮೀನು ಹಂಚಿಕೆಗೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ರವರು ತಿಳಿಸಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು (ಆಗಸ್ಟ್.08) ಜಿಲ್ಲೆಯ ಭೂ ಒಡೆತನ ಯೋಜನೆಯಡಿಯಲ್ಲಿ ಅರ್ಹ ಮಾಜಿ ದೇವದಾಸಿ ಮಹಿಳೆಯರಿಗೆ ಭೂಮಿ ಮಂಜೂರು ಮಾಡುವ ಸಲುವಾಗಿ ಭೂ ಮಾಲೀಕರ ಜಮೀನುಗಳಿಗೆ ಬೆಲೆ ನಿಗದಿಗೊಳಿಸಲು ನಡೆದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗುರುತಿಸಲ್ಪಟ್ಟ ಭೂರಹಿತ ಮಾಜಿ ದೇವದಾಸಿಯರ ಸಬಲೀಕರಣಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಭೂಮಿಯನ್ನು ಖರೀದಿಸಿ ಹಂಚಿಕೆ ಮಾಡುವ ಯೋಜನೆಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಚಾಲನೆ ಇಂದು ನೀಡಲಾಗಿದ್ದು, ಈ ಯೋಜನೆಯಡಿ 2017-18ನೇ ಸಾಲಿಗೆ ಜಿಲ್ಲೆಯ 16 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಭೂ ಹಂಚಿಕೆ ಮಾಡಲಾಗುತ್ತಿದೆ.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗುರುತಿಸಲ್ಪಟ್ಟ ಮಾಜಿ ದೇವದಾಸಿಯರಲ್ಲಿ ಅರ್ಹ ಭೂ ರಹಿತ ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಿ ಆಯ್ಕೆ ಮಾಡಿ ನಿಯಮಾನುಸಾರ ಸವಲತ್ತು ನೀಡಲು ರಾಜ್ಯದ 10 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.  ಇದರಲ್ಲಿ ಕೊಪ್ಪಳ ಜಿಲ್ಲೆಯೂ ಒಂದಾಗಿದ್ದು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅರ್ಹ ಫಲಾನುಭವಿಗಳಿಗೆ ಅವರು ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿ ಭೂ ಮಾಲೀಕರಿಂದ ಸಕರ್ಾರ ನಿಗದಿ ಪಡಿಸಿದ ದರದಲ್ಲಿ  ನಿಯಮಾವಳಿಯನುಸಾರ ಭೂಮಿಯನ್ನು ಖರೀದಿಸಿ ಭೂ ಹಂಚಿಕೆ ಮಾಡಿ ದೇವದಾಸಿಯರ ಸಬಲೀಕರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ಅವರು ಹೇಳಿದರು.

ಪ್ರತಿ ಅರ್ಹ ಫಲಾನುಭವಿಗೆ ಘಟಕ ವೆಚ್ಚ ರೂ. 15 ಲಕ್ಷಗಳನ್ನು ನಿಗದಿಪಡಿಸಲಾಗಿದ್ದು, ಸಕರ್ಾರದ ಮಾರ್ಗಸೂಚಿ ಬೆಲೆಯ ಮೂರು ಪಟ್ಟು ಬೆಲೆಯನ್ನು ನೀಡಿ ಭೂಮಿಯನ್ನು ಖರೀದಿ ಮಾಡಲಾಗುತ್ತದೆ. ಈ ಯೋಜನೆಗೆ ಈ ಹಿಂದೆಯೇ ಭೂಮಿಯನ್ನು ಗುರುತಿಸಿ ಭೂ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಇಂದು ಫಲಾನುಭವಿಗಳು ಹಾಗೂ ಭೂ ಮಾಲೀಕರನ್ನೊಳಗೊಂಡ ಈ ಸಭೆಯಲ್ಲಿ ಭೂ ಮಾಲೀಕರ ಒಪ್ಪಿಗೆ ಮೇರೆಗೆ ಸಂಬಂಧಿಸಿದ ಫಲಾನುಭವಿಗಳಿಗೆ ನಿಯಮಾನುಸಾರ ಭೂ ಹಂಚಿಕೆಯನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.   

ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ.ರಮೇಶರವರು ಫಲಾನುಭವಿಗಳ ಆಯ್ಕೆ ಮಾನದಂಡಗಳು ಹಾಗೂ ಅರ್ಹತೆಗಳು, ಭೂ ಹಂಚಿಕೆ ನಿಯಮಗಳ ಕುರಿತು ಸಂಕ್ಷಿಪ್ತ ವಿವರಣೆಯನ್ನು ನೀಡಿದರು. 

ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಭೂ ಮಾಲೀಕರು, ವಿಮುಕ್ತ ದೇವದಾಸಿ ವೇದಿಕೆಯ ಸಂಚಾಲಕರಾದ ಚಂದಾಲಿಂಗ್ ಕಲಾಲಬಂಡಿ ಹಾಗೂ ಮಾಜಿ ದೇವದಾಸಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.