ಲೋಕದರ್ಶನ ವರದಿ
ವಿಜಯಪುರ 25: ಜಿಲ್ಲೆಯ ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ಕಮರಿಮಠದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ 91ನೇ ಪುಣ್ಯಾರಾಧನೆಯ ಪ್ರಯುಕ್ತ ಅಕ್ಟೋಬರ್ 1 ಹಾಗೂ 2 ರಂದು ವಿವಿಧ ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 1 ರಂದು ಬೆಳಿಗ್ಗೆ 5 ಗಂಟೆಗೆ ಶಂಕರಲಿಂಗೇಶ್ವರ ಹಾಗೂ ಸಿದ್ಧಲಿಂಗ ಮಹಾರಾಜರ ಶಿಲಾ ಮೂತರ್ಿಗೆ ಅಭಿಷೇಕ ನಡೆಯಲಿದೆ. ಸಂಜೆ 5 ಗಂಟೆಗೆ ಪ್ರವಚನಕಾರರಾದ ಹೂವಿನಹಿಪ್ಪರಗಿಯ ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಿಣಿದೇವಿ ಅವರು ಕಳೆದ 18 ದಿನಗಳಿಂದ ನಡೆಸಿಕೊಂಡು ಬಂದ "ಅಥಣಿಯ ಮುರುಘೇಂದ್ರ ಶಿವಯೋಗಿಗಳ ಜೀವನ ಚರಿತ್ರೆ ಕುರಿತ ಪ್ರವಚನ ಕಾರ್ಯಕ್ರಮದ ಮಹಾಮಂಗಲೋತ್ಸವ ಜರುಗಲಿದೆ.
ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶರಾದ ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಹಾಗೂ ಹಳಿಂಗಳಿಯ ಶಿವಾನಂದ ಮಹಾಸ್ವಾಮೀಗಳು ಈ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆವಹಿಸಲಿದ್ದಾರೆ. ಸನ್ಮಾನಿತರಾಗಿ ಚಡಚಣ ಗ್ರಾಮದ ಮಾಜಿ ಸೈನಿಕ ಪಂಡಿತ ಮೇತ್ರಿ, ಪಡನೂರ ಗ್ರಾಮದ ಕಾಶಿಬಾಯಿ ಫಕಿರಪ್ಪ ಭೈರಜಿ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಯಿಂದ ಇಡೀ ರಾತ್ರಿ ಮಡಿ ಭಜನೆ ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ಕಲಾ ತಂಡದಿಂದ ಸಾಮೂಹಿಕ ಭಜನಾ ಪದ ಕಾರ್ಯಕ್ರಮ ನಡೆಯಲಿದೆ.
ಅಕ್ಟೊಬರ್ 2 ರಂದು ಬೆಳಿಗ್ಗೆ 10 ಗಂಟೆಗೆ ಬಂಥನಾಳ ಮಠದ ಪೀಠಾಧೀಶರಾದ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಪಾದಪೂಜಾ ಕಾರ್ಯಕ್ರಮ, ಸೋಲಾಪುರದ ಬಸವರಾಜ ಸಿದ್ರಾಮಪ್ಪ ಕರಜಗಿಕರ ದಂಪತಿಗಳಿಂದ ನೆರವೇರಲಿದೆ. ಸಂಜೆ 5 ಗಂಟೆಗೆ ಬಂಥನಾಳದ ಲಿಂಗೈಕ್ಯ ಸಂಗನಬಸವ ಮಹಾಶಿವಯೋಗಿಗಳ ಭಾವಚಿತ್ರದ ಹೊತ್ತ ಅಡ್ಡ ಪಲ್ಲಕ್ಕಿ ಮೆರವಣಿಗೆಯು, ವಾದ್ಯ ಮೇಳ, ರಂಗುರಂಗಿನ ಮದ್ದಿನ ಸುರಿಮಳೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು, ಕಮರಿಮಠದ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.