ಕೆರೆ ತುಂಬುವ ಯೋಜನೆಗೆ : ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಚಾಲನೆ.
ಅಥಣಿ 23 : ಗುಮಟ್ಟದ ವಿದ್ಯುತ್, ನೀರಾವರಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ರೈತನ ಮಕ್ಕಳಿಗೆ ಶಿಕ್ಷಣ ಕೊಟ್ಟಲ್ಲಿ ನಿಶ್ಚಿತವಾಗಿಯೂ ರೈತನ ಬಾಳು ಬಂಗಾರವಾಗುತ್ತದೆ ಈ ನಿಟ್ಟಿನಲ್ಲಿ ಅಥಣಿ ತಾಲೂಕಿನ ರೈತರಿಗೆ ಈ ಎಲ್ಲ ಸೌಲಭ್ಯಗಳನ್ನು ಕೆಲವೇ ಅವಧಿಯಲ್ಲಿಯೇ ಕೊಡುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಗುಂಡೇವಾಡಿ ಗ್ರಾಮದಲ್ಲಿ ಕಾಗವಾಡ ಮತಕ್ಷೇತ್ರದ 11 ಕೆರೆ ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಈಗಾಗಲೇ ಕರಿ ಮಸೂತಿ ಏತ ನೀರಾವರಿ ಯೋಜನೆ ಮೂಲಕ ಪೂರ್ವಭಾಗಕ್ಕೆ ನೀರಾವರಿ ಕಲ್ಪಿಸಲಾಗಿದ್ದು, ಈ ಯೋಜನೆಯಿಂದ ಹೊರಗೆ ಉಳಿದಿದ್ದ ಪ್ರದೇಶಕ್ಕೆ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಕಾಮಗಾರಿಯೂ ಕೂಡ ಪ್ರಗತಿಯಲ್ಲಿದೆ ಎಂದ ಅವರು ಕಳೆದ ಎರಡು ವರ್ಷಗಳ ಹಿಂದೆ ಅಥಣಿ ಮತಕ್ಷೇತ್ರದ 9 ಕೆರೆಗಳನ್ನು ತುಂಬಿಸುವ ಕಾರ್ಯ ಪೂರ್ಣಗೊಂಡಿದ್ದು, ಒಂದುವರೆ ತಿಂಗಳೊಳಗಾಗಿಯೇ ಈ ಯೋಜನೆಯನ್ನು ಉದ್ಘಾಟನೆಯಾಗಲಿದೆ ಎಂದರು. ಜನಪರ ಯೋಜನೆಗಳಿಗೆ ಜನಪ್ರತಿನಿಧಿಗಳು ಶಂಕುಸ್ಥಾಪನೆ ನೆರವೇರಿಸಿದರೆ ಮಾತ್ರ ಯೋಜನೆಗಳು ಮುಕ್ತಾಯಗೊಳ್ಳುವುದಿಲ್ಲ. ಈ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುವುದರ ಜೊತೆಗೆ ಸಾರ್ವಜನಿಕರ ಸಹಕಾರವನ್ನೂ ಕೂಡ ನಾವು ಕೋರಬೇಕಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ, ಕಾಗವಾಡ ಮತಕ್ಷೇತ್ರದ ಮತದಾರರ ಋಣ ತೀರಿಸಲು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡುತ್ತಿರುವೆ ಹೊರತು ರಾಜಕೀಯ ಲಾಭಕ್ಕಾಗಿ ಅಥವಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಅಲ್ಲ ಎಂದು ಹೇಳಿದ ಅವರು ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೂ ಉತ್ತರ ಭಾಗದ ಗ್ರಾಮಗಳಿಗೆ ಕುಡಿಯಲೂ ಕೂಡ ನೀರು ಕೊಡಲು ಸಾಧ್ಯವಾಗಿರಲ್ಲ ಎಂದ ಅವರು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ವಂಚಿತಗೊಂಡ ಗ್ರಾಮಗಳ 11 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನ ಗೊಳಿಸುತ್ತಿರುವೆ ಎಂದರು. ಬಸವೇಶ್ವರ ಏತ ನೀರಾವರಿ ಯೋಜನೆಯ ಕಮಾಂಡ್ ಪ್ರದೇಶಕ್ಕೆ ಒಳಪಡುವ ಕೆರೆಗಳನ್ನು ಕೆರೆ ತುಂಬುವ ಯೋಜನೆಯಿಂದ ಕೈ ಬಿಟ್ಟು ಆ ಕೆರೆಗಳನ್ನು ಬಸವೇಶ್ವರ ಏತ ನೀರಾವರಿ ಯೋಜನೆ ಮೂಲಕ ತುಂಬಿಸುತ್ತೇವೆ ಎಂದ ಅವರು ಕೆರೆ ತುಂಬುವ ಯೋಜನೆಯ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಕಾಗವಾಡ ಮತಕ್ಷೇತ್ರದ ಅನಂತಪುರ ಗ್ರಾಮದ ಗುಂಡೇವಾಡಿ ಗ್ರಾಮದ ಪಾರ್ಥನಹಳ್ಳಿ ಗ್ರಾಮದ ಚಮಕೇರಿ ಗ್ರಾಮದ ಬೇಡರಹಟ್ಟಿ ಗ್ರಾಮದ ಬಳ್ಳಿಗೇರಿ ಗ್ರಾಮದ ಮಲಾಬಾದ ಗ್ರಾಮದ ಬೆವನೂರ ಗ್ರಾಮದ ಕೆರೆಯನ್ನು ಈ ಯೋಜನೆಯಲ್ಲಿ ತುಂಬಿಸಲಾಗುವುದು ಎಂದರು. ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಹುಣಸಿಕಟ್ಡಿ ಮಾತನಾಡಿ, ಕೆರೆ ತುಂಬುವ ಯೋಜನೆಗೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಹತ್ತಿರದ ಕೃಷ್ಣಾ ನದಿಯ ಎಡದಂಡೆಯಿಂದ 0.21 ಟಿ.ಎಮ್.ಸಿ ನೀರನ್ನು ಎತ್ತಿ 11 ಕೆರೆ ತುಂಬಿಸಲಾಗುವುದು ಎಂದ ಅವರು ಈ ಯೋಜನೆ ಪೂರ್ಣಗೊಳ್ಳಲು ರೈತರ ಸಹಕಾರ ಅತ್ಯಗತ್ಯ ಎಂದ ಅವರು 960 ಎಚ್.ಪಿ.ಯ ಮೂರು ಪಂಪಗಳನ್ನು ಅಳವಡಿಸುವ ಮೂಲಕ ಮತ್ತು 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಿ 11 ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದರು. ಸಭೆಯಲ್ಲಿ ಧುರೀಣರಾದ ಚಂದ್ರಕಾಂತ ಇಮ್ಮಡಿ ಮಾತನಾಡಿದರು. ಧುರೀಣರಾದ ಗುತ್ತಿಗೆದಾರ ಅಕ್ಷಯ ಕಪ್ಪಲಗುದ್ದಿ, ನೀರಾವರಿ ಇಲಾಖೆಯ ಪ್ರಶಾಂತ ಪೊತದಾರ, ಬಸವರಾಜ ಗಲಗಲಿ, ಧುರೀಣರಾದ ಪರ್ಪ ಸವದಿ, ವಿನಾಯಕ ಬಾಗಡಿ, ಶಿವು ಗುಡ್ಡಾಪುರ, ಶಂಕರ ವಾಘಮೋಡೆ, ಓಂಪ್ರಕಾಶ ಪಾಟೀಲ, ಸಿದರಾಯ ತೇಲಿ, ಗುರ್ಪ ಜತ್ತಿ, ಶಿವಾನಂದ ಗೊಲಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಘೂಳಪ್ಪ ಜತ್ತಿ ಸರ್ವರನ್ನು ಸ್ವಾಗತಿಸಿದರು.