ಮುಂಡಗೋಡ ತಾಲೂಕಿನಲ್ಲಿ ಆರೋಗ್ಯ ಸೇವೆಗಳ ಕೊರತೆ: ಜನ ವೇದಿಕೆ ಕರ್ನಾಟಕದಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ!

ಮುಂಡಗೋಡ ತಾಲೂಕಿನಲ್ಲಿ ಆರೋಗ್ಯ ಸೇವೆಗಳ ಕೊರತೆ: ಜನ ವೇದಿಕೆ ಕರ್ನಾಟಕದಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ!  Lack of health services in Mundagoda taluk: Appeal from Jana Vedike Karnataka to Uttara Kannada Dis

ಮುಂಡಗೋಡ 19 : ತಾಲೂಕಿನಲ್ಲಿ ಸಮರ​‍್ಕ ಆರೋಗ್ಯ ಸೇವೆಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಜನ ವೇದಿಕೆ ಕರ್ನಾಟಕ ಕಾರ್ಯಕರ್ತರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಜನ ವೇದಿಕೆ ಕರ್ನಾಟಕ ಸಹಯೋಗದಲ್ಲಿ ಕರ್ನಾಟಕ ಜನಾರೋಗ್ಯ ಚಳುವಳಿ ರಾಜ್ಯದ 17 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಗತಿಗಳ ಕುರಿತು ಸಮಗ್ರ ಅಧ್ಯಯನ ನಡೆಸಿದ್ದು, ಅನೇಕ ಗಂಭೀರ ಸಮಸ್ಯೆಗಳು ಬೆಳಕಿಗೆ ಬಂದಿವೆ. ಅಧ್ಯಯನ ವರದಿ ಪ್ರಕಾರ, ವೈದ್ಯರು ಸೇರಿದಂತೆ ಸಿಬ್ಬಂದಿ ನೇಮಕಾತಿಯಲ್ಲಿ ಭಾರೀ ಕೊರತೆ ಇದೆ. ಅಗತ್ಯವಾದ 104 ತರಹದ ಓಷಧಿಗಳ ಸಮರ​‍್ಕ ಲಭ್ಯತೆ ಇಲ್ಲದಿರುವುದು, ತುರ್ತು ಅಂಬುಲೆನ್ಸ್‌ ಸೇವೆಯಲ್ಲಿ ವಿಳಂಬ, ಹೆರಿಗೆ ಸೇವೆಗಳ ಅಪೂರ್ಣ ವ್ಯವಸ್ಥೆ ಸೇರಿದಂತೆ ಮೂಲಭೂತ ಆರೋಗ್ಯ ಸೌಲಭ್ಯಗಳು ಸಾರ್ವಜನಿಕರಿಗೆ ಸಮರ​‍್ಕವಾಗಿ ದೊರೆಯುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕು ಆರೋಗ್ಯ ಅಭಿಯಾನ ಸಮಿತಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರವಾರದಲ್ಲಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ಅಗತ್ಯ ಓಷಧಿಗಳ ನಿರಂತರ ಸರಬರಾಜು ಖಚಿತಪಡಿಸಬೇಕು ಹಾಗೂ ತುರ್ತು ಆರೋಗ್ಯ ಸೇವೆಗಳನ್ನು ಬಲಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮುಖ್ಯವಾಗಿ ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಲಾಗಿದೆ. ಗ್ರಾಮೀಣ ಭಾಗದ ಜನರು ಸಣ್ಣ ಚಿಕಿತ್ಸೆಗಳಿಗೂ ದೂರ ಪ್ರಯಾಣಿಸಬೇಕಾದ ಪರಿಸ್ಥಿತಿ ಇರುವುದರಿಂದ ಮೈನಳ್ಳಿಯಲ್ಲಿ ಪಿಎಚ್ಸಿ ಸ್ಥಾಪನೆ ಅಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮನವಿಯೊಂದಿಗೆ 2020ರಿಂದ ಇಂದಿನವರೆಗೆ ಸಲ್ಲಿಸಿದ 42 ಮನವಿಗಳ ಪ್ರತಿಗಳು, ಮುಂಡಗೋಡ ತಾಲೂಕಿನ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧ್ಯಯನ ವರದಿ ಹಾಗೂ ಆರೋಗ್ಯ ಸಮಸ್ಯೆಗಳಿಂದ ಸಾವು-ನೋವು ಅನುಭವಿಸಿದ ಐದು ಪ್ರಕರಣಗಳ ಅಧ್ಯಯನಗಳನ್ನು ಸಹ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಅಭಿಯಾನ ಸಮಿತಿಯ ಅಧ್ಯಕ್ಷ ರವಿ ಲಮಾಣಿ ಸೇರಿದಂತೆ ಫಾತೀಮ ಸುಲೇಮಾನ್, ಮಹಾಲಕ್ಷ್ಮಿ ನಾಯ್ಕ್‌, ಜನ್ನಬಾಯಿ ವಿಟ್ಟು ವರಕ್, ಮೈಲಾರಿ ಬೆಂಡಿಗೇರಿ, ಮಂಜುನಾಥ ಪಾಟೀಲ್, ಶ್ರೀಧರ್ ಗುತ್ತಲ, ಭರಮಣ್ಣ ಚಕ್ರಸಾಲಿ, ಮಮತಾ ಎ.ಎಲ್ ಹಾಗೂ ರೂಪಾ ಬಾರ್ಕೆರ್ ಉಪಸ್ಥಿತರಿದ್ದರು.