ಕಂಪ್ಲಿಯಲ್ಲಿ ನಡೆದ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ
ಕಂಪ್ಲಿ 13: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ, ಬಳ್ಳಾರಿವತಿಯಿಂದ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾಯಕ್ರಮ ಶುಕ್ರವಾರ ಜರುಗಿತು. ಆಯಾ ಇಲಾಖೆ ಕಛೇರಿಯಲ್ಲಿ ಅಧಿಕಾರಿಗಳು ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸದೇ, ಸಕಾಲದಲ್ಲಿ ಯೋಜನೆಗಳನ್ನು ತಲುಪಿಸಬೇಕು. ಇತ್ತೀಚೆಗೆ ಬಳ್ಳಾರಿ ನಗರ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದ ಬಾಣಂತಿಯರ ಸಾವಿನ ಪ್ರಕರಣದ ಹಿನ್ನಲೆ ಕಂಪ್ಲಿ ಆಸ್ಪತ್ರೆಯಲ್ಲಿ ಅಂತಹ ದುರ್ಘಟನೆ ನಡೆಯದಂತೆ ಜಾಗೃತಿವಹಿಸಬೇಕೆಂದು ಪ್ರಭಾರಿ ಟಿಎಚ್‌ಒ ಅರುಣ್ ಕುಮಾರ್‌ಗೆ ಖಡಕ್ ಆಗಿ ಸೂಚಿಸಿದರು.
ಕಂಪ್ಲಿ ತಾಲೂಕು ವ್ಯಾಪ್ತಿಯ ಸೋಮಲಾಪುರ ಹೊರವಲಯದಲ್ಲಿ ಚಿರತೆ ದಾಳಿಯಿಂದ ಕುರಿ ಮಾಲೀಕರಿಗೆ ಲಕ್ಷಾಂತರ ನಷ್ಟವಾಗಿರುವ ಜತೆಗೆ ಅಲ್ಲಿನ ಜನರಿಗೆ ಭಯ ಎದುರಾಗಿದ್ದು, ಅಧಿಕಾರಿಗಳ ಗಮನಕ್ಕೆ ಇಲ್ಲಂದ್ರೆ ಹೇಗೆ?. ಕೂಡಲೇ ಅಲ್ಲಿ ಬೋನ್ ಅಳವಡಿಸಿ, ಚಿರತೆ ಸೆರೆ ಹಿಡಿಯುವ ಜತೆಗೆ ಅಲ್ಲಿನ ಗುಡ್ಡಗಾಡು ಪ್ರದೇಶದ ಗ್ರಾಮಗಳ ಹಂಚಿನಲ್ಲಿ ತಂತಿಬೇಲಿ ಹಾಕಿ, ಪ್ರಾಣಿಗಳ ಆತಂಕ ದೂರ ಮಾಡಬೇಕೆಂದು ತಿಳಿಸಿದರು. ಕಂಪ್ಲಿ ಭಾಗದಿಂದ ತೆರಳದೇ, ಬುಕ್ಕಸಾಗರ ಸೇತುವೆ ಮೂಲಕ ಸಾರಿಗೆ ಬಸ್ ಸಂಚಾರದಿಂದ ಈ ಭಾಗದ ಜನರಿಗೆ ತುಂಬ ಸಮಸ್ಯೆಯಾಗುತ್ತಿದ್ದು, ಇದನ್ನರಿತು ಕಂಪ್ಲಿ ಬಸ್ ನಿಲ್ದಾಣದ ಕಂಟ್ರೋಲರ್ ನಿಯಂತ್ರಿಸಿ, ಕಂಪ್ಲಿಯಿಂದ ಎಲ್ಲಾ ಬಸ್ ಸಂಚರಿಸುವಂತೆ ಕ್ರಮವಹಿಸಬೇಕು.
ಬಾಲ್ಯ ವಿವಾಹ ನಡೆಯುತ್ತಿರುವುದು ತಿಳಿದು ಬಂದಿದ್ದು, ಅಧಿಕಾರಿಗಳು ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಗಮನ ಹರಿಸಿ, ಇಂತಹ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು. ಹೀಗೆ ನಾನಾ ಸಮಸ್ಯೆಗಳ ಸಂಬಂಧ ಅಧಿಕಾರಿಗಳ ಗಮನಕ್ಕೆ ತಂದು, ನಿಗಾವಹಿಸುವಂತೆ ಬಳ್ಳಾರಿ ಲೋಕಾಯುಕ್ತ ಸಿಪಿಐ ಮಹ್ಮದ್ ರಫಿಕ್ ತಿಳಿಸಿದರು. ಕಂಪ್ಲಿ-ಕೊಟ್ಟಾಲ್ ರಸ್ತೆಯು ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ಧರಿಂದ ಇಲ್ಲಿನ ಕಾಮಗಾರಿಗೆ ವೇಗ ನೀಡಲು ಸೂಕ್ತಕ್ರಮವಹಿಸಬೇಕೆಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ನೇತೃತ್ವದಲ್ಲಿ ರೈತರಾದ ಸಿಪಿಐ ಮಹ್ಮದ್ ರಫಿಕ್‌ಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಶಿರಸ್ತೇದಾರ ರಮೇಶ, ಆರ್‌ಟಿಐ ಕಾರ್ಯಕರ್ತ ರಾಜಕುಮಾರ, ವಿವಿಧ ಇಲಾಖೆಯ ಅರುಣ್ ಕುಮಾರ್, ರವಿ, ಟಿ.ಎಂ.ಬಸವರಾಜ, ವಿರೇಶ, ಉಷಾ ಸೇರಿದಂತೆ ಇತರರು ಇದ್ದರು.