ಲೋಕದರ್ಶನ ವರದಿ
ಕೂಡ್ಲಿಗಿ 10: ತೀವ್ರ ಮಳೆಯಿಂದ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಂತ್ರಸ್ತರಿಗೆ ನೆರವಾಗಲು ಅಕ್ಕಿ, ರೊಟ್ಟಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದ ತಾಲ್ಲೂಕಿನ ನಾಗಲಾಪುರ ಗ್ರಾಮಸ್ಥರು ಅವುಗಳನ್ನು ಜಿಲ್ಲಾಧಿಕಾರಿಳು ಅಥವಾ ಯಾವುದಾದರೂ ಸಂಘ, ಸಂಸ್ಥೆಗಳ ಮೂಲಕ ಸಂತ್ರಸ್ತರಿಗೆ ತಲುಪಿಸಲು ಶನಿವಾರ ಬಳ್ಳಾರಿಗೆ ತೆಗೆದುಕೊಂಡು ಹೋಗಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರದಿಂದ ಜನರು ಸಂಕಷ್ಟದಲ್ಲಿರುವುದನ್ನು ನೋಡಿದ್ದ ಗ್ರಾಮದ ಅನೇಕ ಜನರು ಶುಕ್ರವಾರ ರಾತ್ರಿ ಒಂದು ಕಡೆ ಸೇರಿ ನಾವು ಯಾವ ರೀತಿಯಲ್ಲಿ ಅವರಿಗೆ ನೆರವಿ ನೀಡಬಹದು ಎಂದು ಚಚರ್ೆ ನಡೆಸಿದ ನಂತರ ಸಂತ್ರಸ್ತರಿಗೆ ಅಗತ್ಯವಾದ ಆಹಾರ ಪಾದರ್ಥಗಳನ್ನು ನೀಡುವುದರ ಬಗ್ಗೆ ನಿರ್ಧಾರ ಮಾಡಿದ ಗ್ರಾಮಸ್ಥರು, ಸಂಜೆ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಬೆಳಿಗ್ಗೆ ತಮ್ಮ ತಮ್ಮ ಮನೆಗಳಿಂದ ಸಾಧ್ಯವಾದಷ್ಟು ರೊಟ್ಟಿ, ಚೆಟ್ನಿ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂಧಿಸಿದ ಗ್ರಾಮದ ಮಹಿಳೆಯರು ಸುಮಾರು 3 ಸಾವಿರಕ್ಕೂ ಹೆಚ್ಚು ರೊಟ್ಟಿ, ನಾಗರ ಪಂಚಮಿಗೆ ಮಾಡಿದ ಉಂಡಿ, ಶೇಂಗಾ, ಗುರೆಳ್ಳು ಪುಡಿ, ಒಣ ಮೆಣಸಿನ ಕಾಯಿ ಮತ್ತು ಉಣಸೆ ಹಣ್ಣಿನ ಚಟ್ನಿಯನ್ನು ತಂದು ನೀಡಿದರು. ಅಲ್ಲದೆ ಗ್ರಾಮದಲ್ಲಿ ನಾಲ್ಕು ಕ್ವಿಂಟಲ್ ಅಕ್ಕಿ ಕೂಡ ಸಂಗ್ರಹವಾಯಿತು. ಇವೆಲ್ಲವನ್ನು ಚೀಲಗಳಲ್ಲಿ ತುಂಬಿಕೊಂಡ ಗ್ರಾಮದ ಮುಖಂಡರು ಆಟೋದಲ್ಲಿ ಹಾಕಿಕೊಂಡು ಬಳ್ಳಾರಿಯತ್ತ ಸಾಗಿದರು.