ಕುಡತಿನಿ: ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಸಲಹೆ
ಬಳ್ಳಾರಿ 24:ಜಿಲ್ಲೆಯಲ್ಲಿ ತಾಯಿ ಮಗುವಿನ ಮರಣ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು 9 ಮತ್ತು 24 ರಂದು ಎರಡು ಬಾರಿ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಕುಡತಿನಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುರಕ್ಷಾ ಮಾತೃತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾತೃತ್ವ ಸುರಕ್ಷಾ ಅಭಿಯಾನದ ಮೂಲಕ ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಲವು ಸುರಕ್ಷಾ ಕ್ರಮಗಳು ಜಾರಿಗೊಳಿಸಿದೆ. ಗರ್ಭಿಣಿಯರ ಸುರಕ್ಷತೆ ದೃಷ್ಟಿಯಿಂದ ಪ್ರತಿ ತಿಂಗಳು 2 ಬಾರಿ ಗರ್ಭಿಣಿಯರ ಆರೋಗ್ಯ ತಪಾಸಣೆ ಕೈಗೊಂಡು, ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ವಹಿಸುತ್ತಿದೆ ಎಂದರು.ಗರ್ಭಿಣಿಯರಿಗೆ ಅಗತ್ಯವಾದ ಪೌಷ್ಠಿಕಾಂಶದ ಆಹಾರ, ಆರೋಗ್ಯ ಸೇವೆ ಒದಗಿಸಿ ಪ್ರಸವಪೂರ್ವ ತಪಾಸಣೆ ಸ್ತ್ರೀರೋಗ ವೈದ್ಯರಿಂದ 2ನೇ ಅಥವಾ 3ನೇ ತ್ರೈಮಾಸಿಕದಲ್ಲಿ ಕನಿಷ್ಠ 1 ಬಾರಿ ತಪಾಸಣೆ ನಡೆಸಲಾಗುತ್ತದೆ. ಗರ್ಭಧಾರಣೆಯ 3 ತಿಂಗಳ ಮೊದಲು ಮತ್ತು ಗರ್ಭಧಾರಣೆಯ 1ನೆ ತ್ರೈಮಾಸಿಕದಲ್ಲಿ ಪೋಲಿಕ್ ಆಮ್ಲ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ. 500 ಎಂಸಿಜಿ ಕ್ಯಾಲ್ಸಿಯಂ ಅನ್ನು ಗರ್ಭಧಾರಣೆಯ 14ನೆ ವಾರದಿಂದ ಹೆರಿಗೆ ಮತ್ತು 6 ತಿಂಗಳ ನಂತರದ ಅವಧಿಯವರೆಗೆ ನೀಡಲಾಗುತ್ತಿದೆ. 3ನೆ ತ್ರೈಮಾಸಿಕ ಪಿಡಬ್ಲ್ಯೂಗಳ ಲೈನ್ ಪಟ್ಟಿ ಮಾಡಲಾಗುತ್ತಿದೆ. ಓರಲ್ ಗ್ರೂಕೋಸ್ ಟಾಲರೆನ್ಸ್ ಟೆಸ್ಟ್ ಬಳಸಿಕೊಂಡು ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್‌ಗಾಗಿ ಪ್ರತಿ ಗರ್ಭಿಣಿಯ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.ಚೊಚ್ಚಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ ಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್ ಮುಂತಾದ ಕಾರಣಗಳಿದ್ದರೆ ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾವಹಿಸುವ ಮೂಲಕ ಹೆರಿಗೆ ಅವಧಿಯಲ್ಲಿ ಕಂಡು ಬರಬಹುದಾದ ಸಂಭವನಿಯ ತೊಂದರೆಗಳನ್ನು ವೈದ್ಯರ ನಿಗಾವಣೆ ಮೂಲಕ ಗುರ್ತಿಸಿ ಸುರಕ್ಷಿತ ಹೆರಿಗೆ ಕೈಗೊಳ್ಳಲಾಗುವುದು ಎಂದರು.
ಯಾವುದೇ ಗ್ರಾಮದಿಂದ ರಾತ್ರಿ ವೇಳೆ ತುರ್ತು ಚಿಕಿತ್ಸೆ ಕೋರಿ ಬರುವ ಬಾಣಂತಿಯರಿಗೆ ವೈದ್ಯರು ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿ ತಕ್ಷಣವೇ ಸ್ಪಂದನೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಅಭಿಯಾನದಲ್ಲಿ ತಪಾಸಣೆಗೆ ಆಗಮಿಸಿದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮತ್ತು ವಿಶೇಷ ಭೋಜನ ವ್ಯವಸ್ಥೆ ಏರಿ್ಡಸಲಾಗಿತ್ತು.ಈ ವೇಳೆ ಕುಡುತಿನಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಬಸಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕುಡುತಿನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗುರುಬಸವರಾಜ್, ಡಾ.ಭ್ಯಾಗ್ಯಲಕ್ಷ್ಮಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.