ಕೊಟ್ಟೂರು: ಉಜ್ಜಯಿನಿ ಪೀಠದಿಂದ ಐದು ಸಾವಿರ ಬೀಜದುಂಡೆ ತಯಾರಿಕೆ

ಲೋಕದರ್ಶನ ವರದಿ

ಕೊಟ್ಟೂರು 19: ಉಜ್ಜಯಿನಿ ಸದ್ಧರ್ಮ ಪೀಠದಿಂದ ಶಾಲಾ ವಿದ್ಯಾರ್ಥಿಗಳೊಂದಿಗೆ ಐದು ಸಾವಿರ ಬೀಜದುಂಡೆ ಸಿದ್ಧ್ದಪಡಿಸಿ ಭಕ್ತರಿಗೆ ವಿತರಿಸಲಾಗುವುದು ಎಂದು ಶ್ರೀಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. 

ಸದ್ಧರ್ಮ ಪೀಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಉಜ್ಜಯಿನಿ ಸದ್ಧ್ದರ್ಮ ಪೀಠದ ಮಳೆ ಶಕೆ ಪೀಠವಾಗಿರುವುದರಿಂದ ಉಜ್ಜಯಿನಿಯನ್ನು ಹಸಿರು ಗ್ರಾಮವಾಗಿಸುವ ಉದ್ದೇಶ ಹೊಂದಲಾಗಿದೆ. ಈ ದಿಸೆಯಲ್ಲಿ ಬೀಜದುಂಡೆಗಳನ್ನು ತಯಾರಿಸಲಾಗುತ್ತಿದ್ದು, ಶ್ರಾವಣ ಮಾಸದಲ್ಲಿ ಶ್ರೀಪೀಠಕ್ಕೆ ಬರುವ ಭಕ್ತರಿಗೆ ನೀಡಿ ಹೊಲದಲ್ಲಿ ನೆಟ್ಟು ಬೆಳೆಸಲು ತಿಳಿಸಲಾಗುವುದು ಎಂದರು. 

ಅಲ್ಲದೆ ತಾವು ಭಾಗವಹಿಸುವ ಸಾಮೂಹಿಕ ವಿವಾಹದಲ್ಲಿ ನವ ಜೋಡಿಗಳಿಗೆ ಸಸಿಗಳನ್ನು ವಿತರಿಸುವ ಸಂಪ್ರದಾಯವನ್ನು ಆಚರಣೆಗೆ ತಂದಿದ್ದು, ಆ ಸಸಿಗಳನ್ನು ಜೋಪಾನವಾಗಿ ಮಕ್ಕಳಂತೆ ಬೆಳಸಬೇಕು. ಭಕ್ತರಿಗೆ ಧರ್ಮೋಪದೇಶದ ಜತೆಗೆ ಪ್ರಕೃತಿ ಎಷ್ಟು ಮುಖ್ಯ, ಪ್ರಕೃತಿ ನಾಶದಿಂದ ಉಂಟಾಗುವ ದುಷ್ಪರಿಣಾಮ, ಮುಂದಿನ ಪೀಳಿಗೆ ಅನುಭವಿಸುವ ಕಷ್ಟಗಳ ಅರಿವು ಮೂಡಿಸಲಾಗುವುದು. ಶ್ರೀಪೀಠದಲ್ಲಿ ಬೀಜದುಂಡೆಗಳನ್ನು ತಯಾರಿಸಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಶ್ರೀಪೀಠದ ಸಹಾಯಕ ಕಾರ್ಯದರ್ಶಿ  ವೀರೇಶ, ವಕೀಲ ಅಳವರ ಮರುಳಸಿದ್ದಪ್ಪ ಇದ್ದರು.