ಕೊಪ್ಪಳ 11: ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮದುವೆ ಮಂಟಪದಲ್ಲೂ ಮತದಾನ ಜಾಗೃತಿ ಮೂಡಿಸಲಾಯಿತು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಗುರುವಾರದಂದು ಜಿಲ್ಲೆಯ ಕುಷ್ಟಗಿ ತಾಲೂಕು ಪಂಚಾಯಿತಿ ಸಿಬ್ಬಂದಿ ವೀರಯ್ಯರವರ ಮಗಳ ಮದುವೆ ಸಮಾರಂಭವು ಇದಕ್ಕೆ ಸಾಕ್ಷೀಯಾಗಿದೆ.
ಹೌದು ಕುಷ್ಟಗಿ ತಾಲೂಕು ಮತದಾರರ ಜಾಗೃತಿ ಸಮಿತಿಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮದುವೆ ಸಂಭ್ರಮದಲ್ಲಿ ಸ್ವೀಪ್ ಕಾರ್ಯಕ್ರಮ ಆಯೋಜಿಸಿದ್ದು, ವಿಶೇಷವಾಗಿತ್ತು. ಕುಷ್ಟಗಿ ತಾಲೂಕು ಪಂಚಾಯಿತಿ ಸಿಬ್ಬಂದಿಯಾದ ವೀರಯ್ಯರವರ ಮಗಳ ಮದುವೆ ಸಮಾರಂಭದಲ್ಲಿ ಕಡ್ಡಾಯ ಮತದಾನದ ಬಗ್ಗೆ ನವ ದಂಪತಿಗಳ ಜೊತೆ ಮದುವೆಗೆ ಆಗಮಿಸಿದ ಎಲ್ಲ ಬಂಧು ಬಳಗದವರಲ್ಲಿ ಜಾಗೃತಿ ಮೂಡಿಸಲಾಯಿತು ಮತ್ತು ಮತದಾನದ ಪ್ರತಿಜ್ಞಾವಿಧಿಯನ್ನೂ ಸಹ ಬೋಧಿಸಲಾಯಿತು. ತಾ.ಪಂ. ಇಒ, ಎಡಿ, ಪಿಡಿಒಗಳು ಮತ್ತು ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.