ಲೋಕದರ್ಶನ ವರದಿ
ಕೊಪ್ಪಳ 02: ಸಮಾಜದ ಅಂಕುಡೊಂಕು ತಿದ್ದುವಲ್ಲಿ ಹಾಗೂ ಸಮಾಜದ ಉತ್ತಮ ಕಾರ್ಯಗಳನ್ನು ಎತ್ತಿ ತೋರಿಸುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದ್ದರಿಂದ ಕಲೆಯನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಅಭಿಪ್ರಾಯ ಪಟ್ಟರು.
ನಗರದ ಗದಗ ರಸ್ತೆಯಲ್ಲಿ ರಾಜಣ್ಣ ಜೇವರ್ಗಿ ವಿರಚಿತ ಕುಂಟ ಕೋಣ ಮೂಕ ಜಾಣ ನಾಟಕದ ನೂರನೇ ಪ್ರಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಟಕ ಎಂಬುದು ಕೇವಲ ಮನರಂಜನೆ ನೀಡುವುದಷ್ಟೇ ಅಲ್ಲ ಅದೊಂದು ಸಮಾಜದ ಅಂಕು ಡೊಂಕುಗಳನ್ನು ಕಲೆಯ ಮೂಲಕ ತೋರಿಸುವ ಒಂದು ಮಾಧ್ಯಮವಾಗಿದೆ. ಆದ್ದರಿಂದ ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಹೇಳಿದ ಅವರು, ಕೊಪ್ಪಳ ತಿರುಳ್ಗನ್ನಡ ನಾಡು ಮಾತ್ರವಲ್ಲ. ಕಲೆಯ ಬೀಡು ಹೌದು. ಕಲೆಗೆ ಇಲ್ಲಿ ಪ್ರೋತ್ಸಾಹ ಇದ್ದೇ ಇರುತ್ತೆ. ಚಿಕ್ಕಂದಿನಿಂದ ನಾನು ನಾಟಕಗಳನ್ನು ನೋಡ್ತಾ ಬೆಳೆದವನು. ಪೌರಾಣಿಕ, ಐತಿಹಾಸಿಕ ನಾಟಕಗಳೆಂದರೆ ಮುಗಿಬೀಳುವ ಕಾಲವದು. ಇವತ್ತು ನಾಟಕ ಮಾತ್ರವಲ್ಲ, ಸಿನಿಮಾ ಸಹ ಕುಂಟುತ್ತಿರುವ ಕಾಲಘಟ್ಟದಲ್ಲಿ ಇದ್ದೇವೆ. ಇಂಥ ನಾಟಕಗಳು ಹೆಚ್ಚಾಗಲಿ. ಸದಭಿರುಚಿ ಹೊಂದಿರಲಿ ಎಂದು ಆಶಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೂಕನುರು ಅನ್ನಧಾನೆಶ್ವರ ಶಾಖಾ ಮಠದ ಮಹಾದೇವ ದೇವರು ಮಾತನಾಡಿ, ನಮ್ಮ ಬದುಕಿನ ಚಿತ್ರಣವನ್ನು ಯಥಾವತ್ತಾಗಿ ತೋರಿಸುವ ಮಾಧ್ಯಮವೇ ರಂಗಭೂಮಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರ ಹಾಗೂ ಸಾರ್ವಜನಿಕರ ಮೇಲಿದೆ ಎಂದು ಹೇಳಿದ ಅವರು. ಜೇವರ್ಗಿ ಕಂಪನಿಯಲ್ಲಿರುವ ಕಲಾವಿರನ್ನು ನೋಡುವುದೇ ಭಾಗ್ಯ ರಾಜಣ್ಣ ವಿರಚಿತ ಕುಂಟ ಕೋಣ ಮೂಕ ಜಾಣ ನಾಟಕ ಈಗ 16 ಸಾವಿರ ಪ್ರಯೋಗ ಕಂಡಿದೆ ಎಂದರೆ ಅದರಲ್ಲಿರುವ ಸಾಹಿತ್ಯ ಮತ್ತು ಸಂದೇಶಕ್ಕೆ ಎಷ್ಟು ತಾಗತ್ತಿದೆ ಎಂಬು ತಿಳಿಯುತ್ತಿದೆ. ಆದರೆ ಕಲಾವಿದರಿಗೆ ಬೇರೆ ಬದುಕೆ ಇಲ್ಲ. ಅವರ ಮಾತು ಮತ್ತು ಕೃತಿ ಎರಡು ಒಂದೆ ಅಗಿರುತ್ತದೆ. ಆದ್ದರಿಂದ ಪ್ರತಿಯೋಬ್ಬರು ಕಲಾವಿದರನ್ನು ಅವರ ಕಲೆಯನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲಾವಿದರ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಲಕ ರಾಜಣ್ಣ ಜೇವರ್ಗಿ ಹಾಗೂ ಹಿರಿಯ ಕಲಾವಿದ ಹಾಗೂ ಕವಿ ಪ್ರಕಾಶ ಕಡಪಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ಕಳಕಪ್ಪ ಕಂಬಳಿ, ಅಪ್ಪಣ್ಣ ಪದಕಿ. ನಗರಸಭೆ ಸದಸ್ಯ ವಿರೂಪಾಕ್ಷಪ್ಪ ಮೋರನಾಳ, ಮಾಲಕ ರಾಜಣ್ಣ ಜೇವರ್ಗಿ, ವ್ಯವಸ್ಥಾಪಕ ಹನಮಂತಪ್ಪ ಬಾಗಲಕೋಟ, ಮಂಜುನಾಥ ಸೋರಟುರು, ಬಸವರಾಜ ಪುರದ ಗವಿಸಿದ್ದಪ್ಪ ಜಂತಕಲ್ ಇತರರು ಇದ್ದರು.