ಕೊಪ್ಪಳ: ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಮೂಲಭೂತ ಸೌಕರ್ಯ: ಸುನೀಲ ಕುಮಾರ

ಕೊಪ್ಪಳ 08: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಮತದಾನ ನಡೆಯುತ್ತಿದ್ದು ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು. 

ಅವರು (ಏ.08) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಚುನಾವಣೆಗೆ ಸಂಬಂಧಿಸಿದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶೇಷವಾಗಿ ವಿಕಲಚೇತನ ಮತದಾರರಿಗೆ ಹಾಗೂ ವಯೋವೃದ್ದರಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕೆಂದು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ನಿಂದ ಹಾಗೂ ಪಟ್ಟಣ, ನಗರ ಪ್ರದೇಶಗಳಲ್ಲಿ ನಗರಸಭೆಯಿಂದ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಪ್ರತಿ ಮತಗಟ್ಟೆಯಲ್ಲಿ ವ್ಹೀಲ್ ಚೇರ್ ಮತ್ತು ಮ್ಯಾಗ್ನಿಪೈಡ್ ಗ್ಲಾಸ್ ಸೇರಿದಂತೆ ಸಹಾಯಕ್ಕಾಗಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗುತ್ತದೆ ಎಂದರು. 

ಈಗಾಗಲೇ ದಿವ್ಯಾಂಗ ಮತದಾರರು ಇರುವ ಮತಗಟ್ಟೆಯನ್ನು ಗುರುತಿಸಲಾಗಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಯಾರಿಗೆ ಮತಗಟ್ಟೆವರೆಗೆ ಆಗಮಿಸಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ, ಅಂತಹ ಮತದಾರರಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಹಾಗೂ ಎಲ್ಲಾ ಮತಗಟ್ಟೆ ವ್ಯಾಪ್ತಿಗಳಲ್ಲಿಯು ದಿವ್ಯಾಂಗ ಮತದಾರರಿಗೆ ವಾಹನದ ಸೌಕರ್ಯವನ್ನು ಕಲ್ಪಿಸಲಾಗುತ್ತದೆ ಎಂದರು. ಜಿಲ್ಲೆಯ ಎಲ್ಲಾ ಮತಗಟ್ಟೆಗೆ ವಾಹನಗಳು ಸರಗವಾಗಿ ಸಂಚರಿಸುವ ದೃಷ್ಟಿಯಿಂದ ಅಗತ್ಯವಿರುವ ರಸ್ತೆ ನಿರ್ಮಾಣ , ದುರಸ್ಥಿ ಕೈಗೊಳ್ಳಬೇಕೆಂದು ಅನುಷ್ಟಾನ ಏಜೆನ್ಸಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿದರ್ೇಶನ ನೀಡಲಾಗುತ್ತದೆ. ಮತಗಟ್ಟೆ ವಾಹನ ಸೇರಿದಂತೆ ವೀಕ್ಷಕರು, ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಯಾವುದೇ ಅಡೆತಡೆಗಳಿಲ್ಲದೆ ಪ್ರತಿ ಮತಗಟ್ಟೆಗಳಿಗೆ ಸರಾಗವಾಗಿ ತಲುಪುವಂತಿರಬೇಕೆಂದು ಸೂಚನೆ ನೀಡಿದರು. 

ಮತಗಟ್ಟೆ ಸಿಬ್ಬಂದಿಗಳಿಗೆ ಈಗಾಗಲೇ ಏಪ್ರಿಲ್ 9 ರಂದು ಮೊದಲ ತರಬೇತಿ ನೀಡಲು ದಿನಾಂಕ ನಿಗಧಿಯಾಗಿದ್ದು ಕಡ್ಡಾಯವಾಗಿ ಎಲ್ಲಾ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಬೇಕು. ಯಾರಾದರೂ ಗೈರು ಹಾಜರಾಗಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ಇದೇ ಕ್ಷೇತ್ರದ ಮತದಾರರಾಗಿ ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಲ್ಲಿ ಮತದಾನ ಮಾಡಲು ಇಡಿಸಿ ನೀಡಲಾಗುತ್ತದೆ. ಆದರೆ ಈ ಕ್ಷೇತ್ರ ಮತದಾರರಾಗಿ ಬೇರೆ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಲ್ಲಿ ಮಾತ್ರ ಅಂಚೆ ಮತಪತ್ರವನ್ನು ನೀಡಲಾಗುತ್ತದೆ. ಹಾಗೂ ಈಗಾಗಲೇ ಮೊದಲ ಹಂತದಲ್ಲಿ ನಡೆದ ಚುನಾವಣೆಯ ಕರ್ತವ್ಯದಲ್ಲಿದ್ದಲ್ಲಿ ಅಲ್ಲಿನ ಮತದಾನ ಮುಕ್ತಾಯವಾಗಿರುವುದರಿಂದ ಇಲ್ಲಿಗೆ ಆಗಮಿಸಿ ಮತದಾನ ಮಾಡಬೇಕಾಗುತ್ತದೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಹಾಗೂ ಕೆ.ಎಸ್.ಆರ್.ಟಿ.ಸಿ. ವಾಹನ ಚಾಲಕರು ಸೇರಿದಂತೆ ಯಾರು ಸಹ ತಮ್ಮ ಮತ ಚಲಾವಣೆಯಿಂದ ವಂಚಿತರಾಗದಂತೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ. ಇದೇ ಕ್ಷೇತ್ರದ ಮತದಾರರಾಗಿ ಇಲ್ಲಿಯೇ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗುವ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಗೆ ಅಂಚೆ ಮತಪತ್ರವನ್ನು ವಿತರಣೆ ಮಾಡಲಾಗುತ್ತದೆ ಎಂದರು. 

ಮತದಾನ ಸಿಬ್ಬಂದಿಗಳಿಗೆ ತರಬೇತಿ ನೀಡುವಾಗ ಬಹಳ ಅಚ್ಚುಕಟ್ಟಾಗಿ ಮನಮುಟ್ಟುವಂತೆ ಅವರಿಗೆ ಮನವರಿಕೆ ಮಾಡಿಕೊಡಬೇಕು. ಮತದಾನದ ವೇಳೆ ಯಾವುದೇ ತೊಂದರೆಯಾಗದಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ಮನಮುಟ್ಟುವಂತೆ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಬೇಕು ಎಂದು ಎಲ್ಲಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಪೆದ್ದಪ್ಪಯ್ಯ, ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ ಶ್ರೀಧರ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.