ಕೊಪ್ಪಳ: ಜಾನಪದ ಕಾರ್ಯಕ್ರಮಗಳ ಮೂಲಕ ತಂಬಾಕು ನಿಯಂತ್ರಣಕ್ಕೆ ಜಾಗೃತಿ

Koppal: Awareness for tobacco control through folk programs

ಕೊಪ್ಪಳ: ಜಾನಪದ ಕಾರ್ಯಕ್ರಮಗಳ ಮೂಲಕ ತಂಬಾಕು ನಿಯಂತ್ರಣಕ್ಕೆ ಜಾಗೃತಿ 

ಕೊಪ್ಪಳ 13: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಜಾನಪದ ಕಾರ್ಯಕ್ರಮಗಳ ಮೂಲಕ ತಂಬಾಕು ನಿಯಂತ್ರಣಕ್ಕೆ ಕೊಪ್ಪಳ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ವಿಶೇಷ ಜಾಗೃತಿ ಮೂಡಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ ಜಿಲ್ಲಾ ತಂಬಾಕು ನಿಯಂತ್ರಣ ಕೊಶ ಕೊಪ್ಪಳ ಹಾಗೂ ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ, ಅಳವಂಡಿ ಇವರ ಸಹಯೋಗದಲ್ಲಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಕುರಿತು ಜಾನಪದ ಸಂಗೀತ ಬೀದಿ ನಾಟಕ ಕಾರ್ಯಕ್ರಮ ನಡೆಯಿತು.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕಿನ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕಳಾಸಪುರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ತಂಬಾಕು ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ತಂಬಾಕಿನ ನಿಕೋಟಿನ್ ಅಂಶದಿಂದ ನಮ್ಮ ದೇಹವು ಕ್ಯಾನ್ಸರ್, ದಂತ ಕ್ಷಯ, ಗರ್ಭಪಾತ, ಹೃದಯ ರೋಗ ಸಮಸ್ಯೆ ಗಂಟಲು ನೋವು, ಮೂತ್ರಕೋಶ ತೊಂದರೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಗೆ ತುತ್ತಾಗಿ ಸಾವನ್ನು ತರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿತ ಕಾನೂನು ಜಾರಿಯಲ್ಲಿದೆ. ತಂಬಾಕು ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.  ಶಾಂತಮ್ಮ ಅವರು ಮಾತನಾಡಿ, ತಂಬಾಕು ಸೇವನೆಯಿಂದ ಭಾರತ ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಮರಣ ಹೊಂದುತ್ತಿದ್ದಾರೆ. ಶೇಕಡ 15ರಷ್ಟು ಯುವ ಪೀಳಿಗೆ ಬಲಿಯಾಗಿ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ಧೂಮಪಾನ ಮಾಡುವುದು ಶಿಕ್ಷಾಹಾರ ಅಪರಾಧವಾಗಿರುತ್ತದೆ ಸಾರ್ವಜನಿಕರು ಇದರ ಬಗ್ಗೆ ಅರಿತು ಜಾಗೃತರಾಗಬೇಕು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮೂಲಕ ರಾಷ್ಟ್ರೀಯ ತಂಬಾಕು ನಿಯಂತ್ರಣ ಯೋಜನೆ ಅಡಿಯಲ್ಲಿ ಪ್ರಸನ್ನ ಮುಕ್ತ ಕೇಂದ್ರಗಳ ಮೂಲಕ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಆಪ್ತ ಸಮಾಲೋಚನೆ ಮೂಲಕ ಸೂಕ್ತ ಚಿಕಿತ್ಸೆ ಮತ್ತು ಸಲಹೆ ಮಾರ್ಗದರ್ಶನ ಮೂಲಕ ತಂಬಾಕು ಚಟ್ಟವನ್ನು ಬಿಡಿಸಲಾಗುತ್ತದೆ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಸರಸ್ವತಿ ಸೇರಿದಂತೆ ಮತ್ತಿತರರಿದ್ದರು. ಅಳವಂಡಿಯ ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘದ ಕಲಾವಿದರಾದ ವೀರೇಶ ಹಾಲಗುಂಡಿ, ಸಿದ್ದಲಿಂಗಯ್ಯ ಗೋಲ್ರೇಕೊಪ್ಪ, ವಿರುಪಾಕ್ಷ ಎಡಿಯಪುರ್ ಮಹಾದೇವಪ್ಪ ಐನಕ್ಕನವರ, ವಸಂತ ಉಳ್ಳಾಗಡ್ಡಿ ಉಮೇಶ್ ಸಿದ್ದಲಿಂಗಮ್ಮ ಹಾಲಗುಂಡಿ, ಶಿವಲಿಂಗಮ್ಮ ಹಲಗಿ ಕಲಾವಿದರು ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಹಾಗೂ ತಂಬಾಕು ನಿಯಂತ್ರಣ ಕುರಿತು ಜಾನಪದ ಸಂಗೀತ ಬೀದಿ ನಾಟಕ ಕಲಾಭಿನಯದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.