ಕೊಹ್ಲಿ ಭಾರತದ ಶ್ರೇಷ್ಠ ವೈಟ್ ಬಾಲ್ ಕ್ರಿಕೆಟಿಗ

ನವದೆಹಲಿ, ಜುಲೈ 3: ಟೀಮ್ ಇಂಡಿಯಾ ಹಾಲಿ ನಾಯಕ  ವಿರಾಟ್ ಕೊಹ್ಲಿ ವೈಟ್ ಬಾಲ್ ನಲ್ಲಿ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಕ್ರಿಕ್ ಟ್ರ್ಯಾಕರ್ ವೆಬ್ ಸೈಟ್ ಗೆ ಸಂದರ್ಶನ ನೀಡಿದ ಅವರಿಗೆ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನಡುವೆ ಸೀಮಿತ ಓವರ್ ಗಳ ಸರ್ವ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಇದಕ್ಕೆ ಮುಂಬಯಿ ಆಟಗಾರ ಜಾಫರ್, ಹಾಲಿ ನಾಯಕ ಕೊಹ್ಲಿಯನ್ನು ಹೆಸರಿಸಿದ್ದಾರೆ.

ಭಾರತ ಪರ 31 ಪಂದ್ಯಗಳಿಂದ 1944 ರನ್ ಕಲೆಹಾಕಿರುವ ಬಲಗೈ ಆಟಗಾರ ಜಾಫರ್ ಗೆ ಇದೇ ವೇಳೆ ತಮ್ಮ ನೆಚ್ಚಿನ ನಾಯಕನನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಆಯ್ಕೆ ಮಾಡಿದ್ದಾರೆ. '' 2000ದ ಇಸವಿಯ ಬಳಿಕ ತಂಡವನ್ನು ರಚಿಸಿದ ಸೌರವ್, ಆಟಗಾರರ ಬೆಂಬಲಕ್ಕೆ ನಿಲ್ಲುವ ಜತೆಗೆ ಅವರು  ಬೆಳೆಯಲು ನೆರವಾಗುತ್ತಿದ್ದರು. ಹೀಗಾಗಿಯೇ ಸೆಹ್ವಾಗ್, ಜಹೀರ್ ಖಾನ್, ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್  ರಂತಹ ಆಟಗಾರರು  ಬೆಳೆಯಲು ಕಾರಣವಾಯಿತು,'' ಎಂದು ಗಂಗೂಲಿ ಅವರನ್ನು ಜಾಫರ್ ಶ್ಲಾಘಿಸಿದ್ದಾರೆ. ಜಾಫರ್ ಮುಂಬರುವ ದೇಶೀಯ ಟೂರ್ನಿಯಲ್ಲಿ ಉತ್ತರಾಖಂಡ ರಣಜಿ ತಂಡಕ್ಕೆ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.