ಓದಿನಿಂದ ಜ್ಞಾನ ವಿಸ್ತಾರವಾಗಲಿ ಮೊಂಡುವಾದವಲ್ಲ: ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ

ಲೋಕದರ್ಶನ ವರದಿ

ಧಾರವಾಡ 27: ಸ್ವಾತಂತ್ರ್ಯಾನಂತರ ಸಂವಿಧಾನ ಕೊಡಮಾಡಿದ ಮೂಲಭೂತ ಹಕ್ಕುಗಳಲ್ಲಿ ಒಂದಾದ ಕಡ್ಡಾಯ ಶಿಕ್ಷಣದಿಂದ ಸಾಕ್ಷರತೆಯ ಪ್ರಮಾಣ ಹೆಚ್ಚಾಯಿತು. ಸಾಕ್ಷರತೆಯಿಂದ ಅಕ್ಷರಲೋಕ ಪ್ರವೇಶಿಸಿದ ಸರ್ವರಲ್ಲಿಯೂ ಜ್ಞಾನ ವಿಸ್ತಾರಗೊಂಡು ಹೊಸ ವಿಚಾರಗಳು ಹೊರಹೊಮ್ಮಿದವು. ಹೊಸ ವಿಚಾರದಿಂದ ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕುಗಳ ಮೂಲಕ ಸೌಲಭ್ಯಗಳನ್ನು ಪಡೆಯುವ ಜಾಗೃತಿ ಉಂಟಾಯಿತು. ಇದೆಲ್ಲಾ ಸಾಧ್ಯವಾಗಿದ್ದು ನಿರಂತರ ಓದಿನಿಂದ ಶಿಕ್ಷಣವೆಂಬ ಜಾಗೃತಿಯ ಆಯುಧದಿಂದ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಧಾರವಾಡದ ಬುದ್ಧಿಷ್ಟ ಪಾಲಿ ಶಿಕ್ಷಣ ಮತ್ತು ಸಂಶೋಧನ ಟ್ರಸ್ಟನ ಅಧ್ಯಕ್ಷರಾದ ಪಾಲಿ ವಿದ್ವಾಂಸ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ ಅಭಿಪ್ರಾಯಪಟ್ಟರು.

ಅವರು ಧಾರವಾಡದ ಸನ್ಮತಿ ಮಾರ್ಗದಲ್ಲಿರುವ ಡಾ.ಅಂಬೇಡ್ಕರ್ ಭವನದಲ್ಲಿ ಗಣಕರಂಗ ಸಂಸ್ಥೆ ಆಯೋಜಿಸಿದ್ದ ಐದುನೂರು ವೀರ ಮಹಾರಯೋಧರ ಪರಾಕ್ರಮದ 201ನೇ ಕೋರೆಗಾಂವ ವಿಜಯೋತ್ಸವ, ಸಾಧಕರಿಗೆ ಸನ್ಮಾನ, ಮೂರುಕವಿಗಳ ಮೂರು ಕವನ ಸಂಕಲನಗಳ ಬಿಡುಗಡೆ ಮತ್ತು 3ಬಿ ನೆನಪಿನ ಕವಿಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಓದಿನಿಂದ ಜ್ಞಾನ ವಿಸ್ತಾರವಾಗಬೇಕೆ ಹೊರತು ಮೊಂಡುವಾದ ಮಾಡುವ ಬಾಯಿ ಮುಚ್ಚಿಸುವ ಹುಂಬತನ ಬೆಳೆಯಬಾರದು. ಜ್ಞಾನವೆಂಬುದು ಸಾಮಾನ್ಯರನ್ನು ಉದ್ಧಾರಗೊಳಿಸುವುದಾಗಬೇಕೇ ಹೊರತು ಭಯ-ಭೀತಿ ಹುಟ್ಟಿಸಿ ಮೂಢನಂಬಿಕೆಯ ಅಂಧಕಾರದೆಡೆಗೆ ಕರೆದೊಯ್ಯುವುದಾಗಬಾರದು. ಸಾಮಾಜಿಕರ ಮನಸ್ಸನ್ನು ಶುದ್ಧೀಕರಿಸುವುದಾಗಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಚಿಂತಕ ತಮ್ಮಣ್ಣ ಮಾದರ ಅವರು ಮಾತನಾಡುತ್ತಾ, ಭಾರತೀಯರು ಬರೆದ ಇತಿಹಾಸದಲ್ಲಿ ಬೇಕೆಂತಲೇ ಮರೆಮಾಚಲಾಗಿದ್ದ ಕ್ರಿ.ಶ.1818ರಲ್ಲಿ ಕೋರೆಗಾಂವ ವಿಜಯೋತ್ಸವದ ಕುರಿತು ಬ್ರಿಟಿಷರ ಕೃತಿಗಳಲ್ಲಿ ಉಲ್ಲೇಖಗೊಂಡಿರುವುದನ್ನು ಗಮನಿಸಿದ ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ಐದುನೂರು ವೀರ ಮಹಾರ್ಯೋಧರ ಪರಾಕ್ರಮವನ್ನು ನೆನಪಿಸಿ, ಭಾರತೀಯರು ಹೆಮ್ಮೆಯಿಂದ ಓದುವಂತೆ ಮಾಡಿದರು. ಇಂದಿನ ಕಾಲಮಾನದಲ್ಲಿ ಓದು ಕಡಿಮೆಯಾಗಿ ಆಧುನಿಕ ಕಾಲದ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಲ್ಲಿ ವಿನಾಕರಣ ಟೈಂಪಾಸ್ ಮಾಡುತ್ತಿರುವ ಯುವ ಪೀಳಿಗೆಯು ಸಾಹಿತ್ಯದತ್ತ ಒಲವು ತೋರಿಸುವ ಮತ್ತು ಐತಿಹಾಸಿಕ ಘಟನಾವಳಿಗಳ ಮರುನೆನಪು ಮಾಡುವ ಹಾಗೂ ಉದಯೋನ್ಮುಖರ ಕೃತಿಗಳ ಬಿಡುಗಡೆಯೊಂದಿಗೆ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜನೆ ಮಾಡಿರುವ ಗಣಕರಂಗದವರಿಗೆ ಅಭಿನಂದನೆಗಳನ್ನು ಹೇಳಲೇಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೇ ನಿರಂತರ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಪೀಳಿಗೆಯಲ್ಲಿ ವೈಚಾರಿಕ ಮನೋಭಾವ ಬೆಳೆಸುವುದು ಇಂದಿನ ಕಾಲಮಾನದ ಅವಶ್ಯಕತೆಯು ಹೌದು ಅಂಥಹ ಕೆಲಸವನ್ನು ಗಣಕರಂಗ ಮಾಡುತ್ತಿರುವುದನ್ನು ಸರ್ವರೂ ಗಮನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. 

ಚಿಂತಕ ಲಕ್ಷ್ಮಣ ಬಕ್ಕಾಯಿ ಆಶಯ ನುಡಿಗಳನ್ನಾಡಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಪಿತಾಂಬ್ರಪ್ಪ ಬೀಳಾರ (ಸಮಾಜ ಸೇವೆ), ಹೇಮಂತ ಲಮಾಣಿ (ಸಂಗೀತ), ಮಕಬೂಲ ಹುಣಶಿಕಟ್ಟಿ (ರಂಗಭೂಮಿ), ಗಣಪತಿ ಚಲವಾದಿ (ಸಾಹಿತ್ಯ), ಮೈಲಾರಪ್ಪ ಬೂದಿಹಾಳ (ಶಿಕ್ಷಣ), ಎಂ.ಕೆ.ಶೇಖ (ಸಂಘಟನೆ) ಮುಂತಾದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮೂವರು ಉದಯೋನ್ಮುಖ ಕವಿಗಳ ಮೂರು ಕವನ ಸಂಕಲನಗಳ ಬಿಡುಗಡೆ ಮಾಡಲಾಯಿತು. ಕವನ ಸಂಕಲನಗಳ ಕೃತಿ ಪರಿಚಯವನ್ನು ಅತಿಥಿಗಳಾಗಿ ಆಗಮಿಸಿದ್ದ ಗದಗ ಡಯಟ್ ಉಪನ್ಯಾಸಕ ಆರ್.ಎಸ್.ಬುರುಡಿ ಮಾಡಿದರು. ಹಿರಿಯ ರಂಗಕಮರ್ಿ ಹಿಪ್ಪರಗಿ ಸಿದ್ಧರಾಮ ಕಾರ್ಯಕ್ರಮದ ನಿರ್ವಹಣೆ ಮಾಡುತ್ತಾ ನಡುನಡುವೆ ಇತಿಹಾಸ, ರಂಗಭೂಮಿ, ಸಾಹಿತ್ಯ, ಸಮಕಾಲೀನ ವಿದ್ಯಮಾನಗಳು ಹೀಗೆ ಅನೇಕ ವಿಚಾರಗಳನ್ನು ಉಲ್ಲೇಖಿಸಿ ಕಾವ್ಯಾಸಕ್ತರ ಕುತೂಹಲಕ್ಕೆ ಕಾರಣವಾದರು. ರಂಗನಿದರ್ೇಶಕ ಯೋಗೇಶ ಪಾಟೀಲ ವಂದಿಸಿದರು. ನಂತರ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಕವಿಗಳು ಸ್ವರಚಿತ ಕವನಗಳನ್ನು 3ಬಿ ನೆನಪಿನ ಕವಿಗೋಷ್ಟಿಯಲ್ಲಿ ವಾಚಿಸಿದರು. ಅವರಿಗೆ ಗೌರವಪೂರ್ವಕ ಪ್ರಮಾಣಪತ್ರಗಳನ್ನು ನೀಡಲಾಯಿತು. ವೈಭವ ಸಹವಾಸಿ, ಅನಿಲ ಮೇತ್ರಿ, ಎಂ.ಐ.ಚಿಕ್ಕೊಪ್ಪ, ರಾಜು ಹುಳಲೇ, ಅರುಣಕುಮಾರ ನರಗುಂದ, ದಸಗಿರ ಬರಡೋಲ, ಸಿದ್ಧಾರ್ಥ ಸಿಂಗೆ ಮುಂತಾದವರು ಉಪಸ್ಥಿತರಿದ್ದರು.