ಸಾರ್ವಜನಿಕ ಜೀವನವನ್ನು ಅರಿತು ಸಾರ್ವಜನಿಕರ ಸಮಸ್ಯೆ ಆಲಿಸಲು ಮುಂದಾಗಿ : ಚಂದ್ರಶೇಖರ
ಶಿಗ್ಗಾವಿ 25: ಅಧಿಕಾರಿಗಳು ತಾವು ಸರಕಾರಿ ನೌಕರ ಆಗುವ ಪೂರ್ವದ ತಮ್ಮ ಸಾರ್ವಜನಿಕ ಜೀವನವನ್ನು ಅರಿತು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಮುಂದಾಗಬೇಕು. ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಒಳ್ಳೆಯ ಕೆಲಸಗಳು ನಿವೃತ್ತಿಯ ನಂತರದ ಜೀವನವನ್ನು ಸುಖವಾಗಿಡಬಲ್ಲದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕರ ಕುಂದು ಕೊರತೆ, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಅವರು ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಕೆಲಸ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ತಮ್ಮ ಸ್ವಂತ ಕೆಲಸಗಳೆಂದು ಪರಿಗಣಿಸಿ, ಸಮಸ್ಯೆಗಳನ್ನು ನಿಷ್ಠೆಯಿಂದ ಆಲಿಸಿ ಪರಿಹಾರ ಕಲ್ಪಿಸಲು ಮುಂದಾಗಬೇಕು. ಮುಂದಿನ ಕೆಲದಿನಗಳಲ್ಲಿ ರಾಜ್ಯ ಲೋಕಾಯುಕ್ತ ಆಯುಕ್ತರು ಹಾವೇರಿ ಜಿಲ್ಲೆಯ ಎಲ್ಲ ತಾಲೂಕಿಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಂದರ್ಭದಲ್ಲಿ ಯಾವದೇ ಸಮಸ್ಯೆಗಳು, ಕಾಣಿಸಿಕೊಳ್ಳದ ರೀತಿಯಲ್ಲಿ ಅಧಿಕಾರಿಗಳು ತಮ್ಮ ಇಲಾಖೆ ಕೆಲಸವನ್ನು ಮಾಡಬೇಕು ಎಂದರು.
ಕಳೆದ ಎರಡು ವರ್ಷಗಳ ಹಿಂದೆ ಅತೀ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಅನುದಾನದ ಮನೆಗಳು ಮಂಜೂರಾಗಿರುವುದು ಅತಿ ಹೆಚ್ಚು ಶಿಗ್ಗಾವಿ ಮತ್ತು ಸವಣೂರ ತಾಲೂಕಿಗೆ ಆದರೂ ಸಹ ಈ ತಾಲೂಕಿನಲ್ಲಿ ಮನೆಗಳ ಸಮಸ್ಯೆ ಬಗೆಹರಿದಿಲ್ಲ ಕಂದಾಯ ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ತಮ್ಮ ಪಂಚಾಯತಿ ವ್ಯಾಪ್ತಿಯ ವಸತಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಹುಲಗುರಿನ ಗ್ರಾಮ ಪಂಚಾಯಿತಿಯಲ್ಲಿ ಈ ಸ್ವತ್ತು ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆ ಹನುಮಂತಪ್ಪ ಕರೆಣ್ಣನವರ ಅರ್ಜಿ ಸಲ್ಲಿಸಿದ್ದು ಈ ಸ್ವತ್ತು ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಬಂದ ದೂರನ್ನು ಆಲಿಸಿದ ಲೋಕಾಯುಕ್ತರು, ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿಯೂ ಈ ಸ್ವತ್ತು ಸಮಸ್ಯೆ ಹೆಚ್ಚಾಗುತ್ತಿದೆ ಅಧಿಕಾರಿಗಳು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿರುವುದು ಸರಿಯಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ದರಪಟ್ಟಿ ರೂಪದಲ್ಲಿ ನಮೂದಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡದೆ ನಿಗದಿತ ಸಮಯದಲ್ಲಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
್ಷಭಾಕ್ಸ ಸುದ್ದಿ : ಸಾರ್ವಜನಿಕರಿಂದ ಒಟ್ಟು 16 ಸಮಸ್ಯೆಗಳ ಕುರಿತು ಅರ್ಜಿಗಳು ಬಂದಿದ್ದು, ನೀರಿನ ಸಮಸ್ಯೆ, ಶಿಗ್ಗಾವಿಯ ಜಯನಗರದಲ್ಲಿನ ಕೊಳಚೆ ಸಮಸ್ಯೆ ಕುರಿತು ತಲಾ 1 ಅರ್ಜಿ. ಖಾತೆಗಳ ಬದಲಾವಣೆ, ಕಸ ವಿಲೆವಾರಿ ಬೆಳೆಹಾನಿಗೆ ಸಂಬಂಧಿಸಿದಂತೆ ತಲಾ 2 ಅರ್ಜಿ. ರಸ್ತೆ ಸಮಸ್ಯೆ ಗುರುತು 3 ಅರ್ಜಿ ಸೇರಿದಂತೆ ಆಶ್ರಯ ಮನೆಗಳ ಅವ್ಯವಸ್ಥೆ ಬಗ್ಗೆ 5 ಅರ್ಜಿಗಳೊಂದಿಗೆ ಒಟ್ಟು 16 ಅರ್ಜಿಗಳು ಸ್ವೀಕೃತಗೊಂಡು, ಸ್ಥಳೀಯವಾಗಿ ಪರಿಹಾರವಾಗಬೇಕಿದ್ದ ಕೆಲವು ಅರ್ಜಿಗಳಿಗೆ ಅಧಿಕಾರಿಗಳಿಗೆ ಆದೇಶ ನೀಡಿ ಸಾರ್ವಜನಿಕ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ನೀರೀಕ್ಷಕರಾದ ಮುಸ್ತಾಕ ಅಹ್ಮದ, ಹಾಗೂ ದಾದಾವಲಿ ಕೆ.ಎಚ್. ತಹಸೀಲ್ದಾರ ಧನಂಜಯ ಎಂ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಮಣ್ಣವಡ್ಡರ ಉಪಸ್ಥಿತರಿದ್ದರು.