ಖಿಖೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ
ಅಥಣಿ 26 ; ಹರಿದು ಬಂದಳು ಕೃಷ್ಣೆ, ಹರಿದು ಬಂದಳು, ಎಲ್ಲಿ ನೋಡಿದಲ್ಲಿ ಉತ್ಸಾಹ, ನೀರಕ್ಷೆಯನ್ನು ಇಟ್ಟುಕೊಂಡು ಬೊಗಸೆಗಣ್ಣಿನಿಂದ ಕಾಲುವೆಗಳತ್ತ ಸಾವಿರಾರು ರೈತರು ಕಾಲುವೆಗಳತ್ತ ಮುಖ ಮಾಡಿ ನೀರು ಬರುವಿಕೆಗಾಗಿ ಸುಡು ಬಿಸಿಲಿನಲ್ಲಿಯೇ ಕಾಯುತ್ತಿದ್ದರು. ನೀರು ಬರುತ್ತಲೇ ಗಂಟೆ ಗಟ್ಟಲೆ ಕಾಯುತ್ತ ಕುಳಿತವರು ಎದ್ದು ನಿಂತು ಕೆಕೆ ಹಾಕಿದ್ದಲ್ಲದೆ ಸೀಟಿ ಹೊಡೆದು ವಿಜ್ರಂಭಿಸಿದರು. ದಶಕಗಳಿಂದ ನೀರಿನ ನೀರೀಕ್ಷೆಯಲ್ಲಿದ್ದ ಮದಭಾವಿ ಗ್ರಾಮಸ್ಥರ ಕಣ್ಣಲ್ಲಿ ಸಂತೋಷದ ಕಣ್ಣೀರು ಗೊತ್ತಿಲ್ಲದೆ ಬರುತ್ತಿತ್ತು. ಬಟನ್ ಒತ್ತಿ ಮೋಟಾರಗಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆಯವರ ಸತತ ಪ್ರಯತ್ನದ ಫಲವಾಗಿಯೇ ಖಿಖೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಮೊದಲ ಹಂತದಲ್ಲಿ ಯಶಸ್ವಿಯಾಗಿ ಉತ್ತರ ಭಾಗದ ಮದಭಾವಿ ಮತ್ತು ಅರಳಿಹಟ್ಟಿ ಗ್ರಾಮಗಳವರೆಗೆ ಈ ಯೋಜನೆ ಮೂಲಕ ನೀರು ತಲುಪಿದೆ ಎಂದು ಹೇಳಿದರು. ಈ ಯೋಜನೆ ಕೆಲ ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು ಆದರೆ ಹಣಕಾಸು, ತಾಂತ್ರಿಕ ಅಡತಡೆಗಳ ಪರಿಣಾಮ ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳ್ಳಲಿಲ್ಲ ಎಂದ ಅವರು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ಹಣ ಬಿಡುಗಡೆ ಮಾಡಿರುವ ಪರಿಣಾಮ ಈ ಯೋಜನೆ ಮೊದಲ ಹಂತದಲ್ಲಿ ಪೂರ್ಣಗೊಂಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಉತ್ತರ ಭಾಗದ ರೈತರ ಬರಡು ಭೂಮಿಗೆ ಬಸವೇಶ್ವರ ಏತ ನೀರಾವರಿ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 1363 ಕೋಟಿ ಅನುದಾನದ ಈ ಯೋಜನೆ 2017 ರಲ್ಲಿ ಪ್ರಾರಂಭಗೊಂಡು 36 ತಿಂಗಳಲ್ಲಿಯೇ ಪೂರ್ಣಗೊಳ್ಳಬೇಕಿತ್ತು ಎಂದ ಅವರು9520 ಅಶ್ವಶಕ್ತಿ ಯುಳ್ಳ ಮೋಟಾರು ಗಳನ್ನು ಅಳವಡಿಸಲಾಗಿದ್ದು, ಒಟ್ಟು .27ಸಾವಿರ ಎಕರೆ ಭೂಮಿ ನೀರಾವರಿ ಒಳಪಡಲಿದೆ ಎಂದರು. ಸದ್ಯ ಎರಡು ಮೋಟಾರಗಳಿಗೆ ಮಾತ್ರ ಚಾಲನೆ ನೀಡಲಾಗಿದ್ದು, ಇದರಿಂದ ಮದಭಾವಿ ಹಾಗೂ ಅರಳಿಹಟ್ಟಿ ಗ್ರಾಮದ ಸುಮಾರು 9000 ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ ಎಂದ ಅವರು ಈ ಯೋಜನೆಗೆ ಮಾರ್ಚ ತಿಂಗಳ 2017 ರಂದು ಸಿಎಂ ಸಿದ್ದರಾಮ್ಯನವರೇ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಈಗ ಮತ್ತೆ ಅವರೇ ಮುಖ್ಯಮಂತ್ರಿಯಾಗಿರುವಾಗಲೇ ಈ ಯೋಜನೆ ಪ್ರಾರಂಭಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.ನೀರಾವರಿ ಇಲಾಖೆಯ ಬಿ.ಎ ನಾಗರಾಜ, ಪ್ರವೀಣ ಹುಣಸಿಕಟ್ಟಿ, ಬಸವರಾಜ ಗಲಗಲಿ, ಪ್ರಶಾಂತ ಪೋತದಾರ, ಇಲಾಖೆಯ ನಿವೃತ್ತ ಇಂಜನೀಯರ್ ಕೆ.ರವಿ, ಪ. ಪಂ. ಸದಸ್ಯ ಅರುಣ ಗಾಣಿಗೇರ, ಸುರೇಶ ಗಾಣಿಗೇರ, ಚಂದ್ರಕಾಂತ ಇಮ್ಮಡಿ ,ವಿನಾಯಕ ಬಾಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.