ಸಜ್ಜನರ ಸಂಗ ಮಾಡಿ: ಡಾ. ವಿಜಯಲಕ್ಷ್ಮಿ ಪುಟ್ಟಿ

Keep company of good people: Dr. Vijayalakshmi Putti

ಸಜ್ಜನರ ಸಂಗ ಮಾಡಿ: ಡಾ. ವಿಜಯಲಕ್ಷ್ಮಿ ಪುಟ್ಟಿ 

ಬೆಳಗಾವಿ 10: ದುರಾಚಾರಿಗಳ ಹಾಗೂ ಅರಿಯದವರ ಸಂಗ ಮಾಡಿದರೆ ತಾವೇ ಸ್ವತಃ ಹೋಗಿ ಬೆಂಕಿಯಲ್ಲಿ ಬಿದ್ದಂತೆ. ಆದರೆ ಬಲ್ಲವರ, ತಿಳಿದವರ ಹಾಗೂ ಶರಣರ ಸಂಗ ಮಾಡಿದರೆ ಮೊಸರು ಕಡೆದು ಬೆಣ್ಣೆಯನ್ನು ಪಡೆದಂತೆ. ಕಾರಣ ಎಲ್ಲರೂ ಸಜ್ಜನರ ಸಂಗವನ್ನೇ ಮಾಡಬೇಕೆಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ವಿಜಯಲಕ್ಷ್ಮಿ ಪುಟ್ಟಿ ಅಭಿಪ್ರಾಯಪಟ್ಟರು.  

ಅವರು ಸೋಮವಾರ ಕಾರಂಜಿ ಮಠದಲ್ಲಿ 285 ನೇ ಶಿವಾನುಭವ ಗೋಷ್ಠಿ ಅಂಗವಾಗಿ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ ಹಾಗೂ "ಸ್ತುತಿ, ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.  

ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವನ್ನಾಗಿಸಿಕೊಂಡು, ಶರಣಸತಿ ಲಿಂಗಪತಿ ಎಂಬ ಭಾವದೊಂದಿಗೆ ಸಾಧನೆ ಮಾಡಿ ಜನಸಾಮಾನ್ಯರಿಗೆ ಮಾರ್ಗದರ್ಶನ ಮಾಡಿದರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ಸ್ಪೂರ್ತಿ ಎಂದರು. 

ಸಾನಿಧ್ಯವನ್ನು ಕಾರಂಜಿ ಮಠದ ಡಾ. ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ವಿದ್ಯಾ ಹುಂಡೇಕರ್ ವಹಿಸಿದ್ದರು. 

ನಿವೃತ್ತ ಎಸಿ ರವಿ ಕೋಟಾರಗಸ್ತಿ, ಪ್ರಾಚಾರ್ಯ ವಿ. ಬಿ. ದೊಡಮನಿ, ಮಾಜಿ ನಗರ ಸೇವಕಿ ಸರಳಾ ಹೇರೆಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬೆಳಗಾವಿಯ ನೂತನ ಮಹಾಪೌರ ವಾಣಿ ವಿಲಾಸ್ ಜೋಶಿ ಹಾಗೂ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಭಿಂಗೆ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಏ.ಕೆ. ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಸಂಗೀತ ಶಿಕ್ಷಕಿ ನಯನ ಗಿರಿಗೌಡರ ಅತಿಥಿ ಪರಿಚಯ ಮಾಡಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು.