ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಿ: ಜಿ.ಪಂ. ಉಪ ಕಾರ್ಯದರ್ಶಿ ಅಲ್ಲಾಭಕ್ಷಾ

ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಿ: ಜಿ.ಪಂ. ಉಪ ಕಾರ್ಯದರ್ಶಿ ಅಲ್ಲಾಭಕ್ಷಾ Keep children away from mobile phones: G.P. Deputy Secretary Allah Bhaksha


ಕಾರವಾರ, ಫೆ.12:- ಆಧುನಿಕ ಯುಗದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಪ್ರತಿಯೊಬ್ಬರೂ ಅಂತರ್ಜಾಲದ ಬಳಕೆ ಮಾಡುತಿದ್ದು, ಇದರಲ್ಲಿ ಮಕ್ಕಳು ಹೆಚ್ಚಿನ ವಂಚನೆಗೆ ಒಳಗಾಗುತ್ತಿದ್ದು , ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಲ್ಲಾಭಕ್ಷಾ ತಿಳಿಸಿದರು.  ಅವರು ಗುರುವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಇವರ ಸಹಯೋಗದಲ್ಲಿ ನಡೆದ ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸುರಕ್ಷಿತಾ ಅಂತರ್ಜಾಲದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. 

ತಂತ್ರಜ್ಞಾನ ಬೆಳೆದಂತೆ ಅದನ್ನು ಬಳಸುವ ಜನರ ಸಂಖ್ಯೆಯೂ ಹೆಚ್ಚಾಗಿದ್ದು, ಮಕ್ಕಳ ಮೊಬೈಲ್ ಬಳಸುವಾಗ ವಂಚಕರು ಆಸೆ, ಅಮಿಷಗಳನ್ನು ಒಡ್ಡಿ ಕಳುಹಿಸುವ ಸಂದೇಶಗಳನ್ನು ಮಕ್ಕಳು ಅರಿಯದೆ ಲಿಂಕ್‌ಗಳಿಗೆ ಪ್ರವೇಶ ಮಾಡುವುದರಿಂದ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಕೈಗೆ ಮೊಬೈಲ್ ನೀಡಬೇಡಿ. ಸುರಕ್ಷಿತ ಅಂತರ್ಜಾಲ ಬಗ್ಗೆ ಮಾಹಿತಿ ಪಡೆದ ತಾವುಗಳು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು ಎಂದರು. 

ಸಿ.ಇ.ಎನ್ ಅಪರಾಧ ಪೊಲೀಸ್ ವಿಭಾಗದ ಡಿವೈಎಸ್ಪಿ ಬಿ.ಅಶ್ವಿನಿ ಮಾತನಾಡಿ, ಅಂಗೈಯಲ್ಲೇ ಜಗತ್ತು ತೋರಿಸುವ ಅಂತರ್ಜಾಲ ಇಂದು ಪ್ರತಿಯೊಬ್ಬರ ಬದುಕನ್ನು ಆವರಿಸಿಕೊಂಡಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಜನ ಸಾಮಾನ್ಯನಿಂದ ಹಿಡಿದು ತಜ್ಞರವರೆಗೂ ಅಂತರ್ಜಾಲದ ಬಳಕೆ ವ್ಯಾಪಿಸಿದೆ. ಅಂತರ್ಜಾಲ ಬಳಕೆದಾರರನ್ನು ವಂಚಿಸುವುದಕ್ಕಾಗಿಯೇ ಸಂಘಟಿತ ಅಪರಾಧ ಮಾಡುವ ಜಾಲ ಇಂದು ಜಗತ್ತನ್ನೇ ಆಳುತ್ತಿದೆ.       

 ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೈಬರ್ ವಂಚನೆಯ ಜಾಲಕ್ಕೆ ಒಳಗಾಗುತ್ತಿದ್ದು, ಸರಿಯಾದ ಜ್ಞಾನ-ತಿಳುವಳಿಕೆ ಇಲ್ಲದೇ ನಾವಾಗಿಯೇ ಅಂತರ್ಜಾಲ ಬಳಕೆ ವೇಳೆ ತಪ್ಪುಗಳನ್ನು ಮಾಡಿ ತೊಂದರೆಗೀಡಾಗುತ್ತೇವೆ. ಆನ್‌ಲೈನ್ ಹೂಡಿಕೆ, ಉದ್ಯೋಗ , ವಿವಾಹ ಸೇರಿದಂತೆ ಅನೇಕ ವಂಚನೆಗಳಿಗೆ ಒಳಗಾಗುವ ಯುವ ಜನತೆಗೆ ಬೇಸಿಕ್ ಮಾಹಿತಿ ಇಲ್ಲದೇ ಇರುವದೇ ಇದಕ್ಕೆ ಕಾರಣವಾಗಿದೆ. ಇ-ಮೇಲ್, ಹಾಗೂ ವಾಟ್ಸ್‌ ಆಫ್ ಮೊಬೈಲ್ ನಂಬರ್‌ಗೆ ಬರುವ ಅನವಶ್ಯಕ ಲಿಂಕ್ ಒತ್ತುವ ಮೂಲಕ ತಮ್ಮ ವೈಯಕ್ತಿಕ ಮಾಹಿತಿ ನೀಡುವುದರಿಂದ ವಂಚನೆಗಳು ಹೆಚ್ಚಾಗುತ್ತಿವೆ ಎಂದರು. 

ಅನ್ಯ ನಂಬರ್‌ಗಳಿಂದ ವಂಚಕರು ಆಶ್ಲೀಲ ವಿಡಿಯೋ ಕರೆಗಳ ಮೂಲಕ ಮಾತನಾಡಿ, ರೇಕಾರ್ಡ್‌ ಮಾಡಿ ಮಾನಸಿಕವಾಗಿ ಕುಗ್ಗಿಸಿ, ವಂಚನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆರಗಳನ್ನು ಕಟ್ ಮಾಡಬೇಕು. ವಂಚನೆಗೆ ಒಳಗಾದ ತಕ್ಷಣ  ಉಚಿತ ದೂರವಾಣಿ ಸಂಖ್ಯೆ. 1930 ಸಂಪರ್ಕಿಸುವಂತೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು.  ವೈಯಕ್ತಿಕ ಮಾಹಿತಿ, ಒಟಿಪಿ, ಬ್ಯಾಂಕ್ ವಿವರ ಮತ್ತಿತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಜಾಲತಾಣ ಅಥವಾ ಇ-ಮೇಲ್ ಪಾಸ್‌ವರ್ಡ್‌ಗಳನ್ನು ಆಟೋ ಸೇವ್ ಮಾಡಬೇಡಿ, ಆಗಾಗ ಫರ್ಗೆಟ್ ಪಾಸ್‌ವರ್ಡ್‌ ಮೂಲಕ ಪಾಸ್‌ವರ್ಡ್‌ಗಳನ್ನು ರೀಸೆಟ್ ಮಾಡುವುದರ ಮೂಲಕ ಮತ್ತು ವಿಶಿಷ್ಟ ಚಿಹ್ನೆ ಮತ್ತು ಅಂಕಿಗಳನ್ನು ಒಳಗೊಂಡ ಸ್ಟ್ರಾಂಗ್ ಪಾಸ್‌ವರ್ಡ್‌ ನೀಡುವುದರಿಂದ ಜಾಲತಾಣಗಳ ವಂಚನೆಯಿಂದ ಸುರಕ್ಷಿತವಾಗಿರಬಹುದು. ಸಾರ್ವಜನಿಕ ವೈಪೈ ಮತ್ತು ಛಾರ್ಜಿಂಗ್ ಬಳಸಬಾರದು ಎಂದರು. 


Online Scams Cybercrime Cyber Safety Internet Security Online Fraud Children's Safety Mobile Usage