ರಾಣೆಬೆನ್ನೂರಲ್ಲಿ ಸಂಸ್ಕೃತಿ ಪ್ರತಿಬಿಂಬಿಸಿದ ಕರ್ನಾಟಕ ವೈಭವ - ಉಪರಾಷ್ಟ್ರಪತಿ ಜಗದೀಪ್ ಧನಕರ್

Karnataka glory reflected in culture in Ranebennu - Vice President Jagdeep Dhankar

ರಾಣೆಬೆನ್ನೂರಲ್ಲಿ ಸಂಸ್ಕೃತಿ ಪ್ರತಿಬಿಂಬಿಸಿದ ಕರ್ನಾಟಕ ವೈಭವ - ಉಪರಾಷ್ಟ್ರಪತಿ ಜಗದೀಪ್ ಧನಕರ್  

 ರಾಣೆಬೆನ್ನೂರು 08: ಕರ್ನಾಟಕದ ಕಲೆ, ಸಾಹಿತ್ಯ, ಇತಿಹಾಸ ಸಂಸ್ಕೃತಿ ಶ್ರೀಮಂತವಾಗಿದೆ. ಬೇಲೂರು-ಹಳೇಬೀಡು ಶಿಲ್ಪಕಲೆ ಇಡಿ ಜಗತ್ತಿನ ಗಮನ ಸೆಳೆಯುತ್ತಿದೆ ಎಂದು ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಹೇಳಿದರು.   

 ಅವರು ಶುಕ್ರವಾರ ಕೆ. ಎಲ್‌. ಇ. ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜು   ಆವರಣದಲ್ಲಿ  ಕರ್ನಾಟಕ ವೈಭವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.  

ಭರತನಾಟ್ಯ ಹಾಗೂ ಯಕ್ಷಗಾನ ಚಟುವಟಿಕೆ ನೋಡಿದರೆ ಆಶ್ಚರ್ಯವಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ  ಆಧ್ಯಾತ್ಮಿಕತೆ ಕಾಣಿಸುತ್ತದೆ ಎಂದು ಹೇಳಿದರು.  

ಈ ನಾಡಿನಲ್ಲಿ ಜನಿಸಿದ  ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು  ಕನಕದಾಸರು, ಸಂತ ಶಿಶುನಾಳ ಶರೀಫರು  ಸಮ ಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕದಂಬ, ಚಾಲುಕ್ಯ, ಹೊಯ್ಸಳರ ಆಳ್ವಿಕೆ ಹಾಗೂ ವಿಜಯನಗರ ವೈಭವ ಇತಿಹಾಸವಾಗಿದೆ. ಇಂತಹ ಶ್ರೀಮಂತ ಪರಂಪರೆ ಕರ್ನಾಟಕ ರಾಜ್ಯದ ಹೆಮ್ಮೆಯಾಗಿದೆ ಎಂದರು.  

ಕರ್ನಾಟಕ ವೈಭವ ಕಾರ್ಯಕ್ರಮದ  ಮೂಲಕ  ನಾಡಿ ಸಂಸ್ಕತಿ ಪರಂಪರೆ ತಿಳಿಸುವ ಕೆಲಸ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು. ನೂರಾರು ವರ್ಷಗಳ  ಹಿಂದೆ ವಿದೇಶಿಗರು  ನಮ್ಮ ದೇಶಕ್ಕೆ ಬಂದು ನಮ್ಮ ಧಾರ್ಮಿಕ ಸ್ಥಳಗಳನ್ನು ಧ್ವಂಸಮಾಡಿದರು ಹಾಗೂ ನಮ್ಮ ಸಂಸ್ಕತಿ ಹಾಳುಮಾಡಿದರು ಸಹ   ನಮ್ಮ ದೇಶದ ಸಂಸ್ಕತಿ ನಶಿಸಿಹೋಗಲಿಲ್ಲ. ಭಾರತದ  ಸಂಸ್ಕೃತಿ ಹಾಗೂ ಪರಂಪರೆ ಅಷ್ಟು ಆಳವಾಗಿದೆ.  ರಾಷ್ಟ್ರೀಯತೆ ಹಾಗು ಏಕತೆ ನಮ್ಮ ಮಂತ್ರವಾಗಬೇಕು. ರಾಷ್ಟ್ರಾಭಿಮಾನ, ರಾಷ್ಟ್ರೇ​‍್ರಮವಿರಬೇಕು ಹಾಗೂ  ರಾಷ್ಟ್ರದ ಹಿತಕಿಂತ ಯಾವುದು ದೊಡ್ಡದಿಲ್ಲ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕು ಎಂದರು.  

ಜಗತ್ತಿನ ಚಿತ್ತ ಭಾರತ   ದೇಶದ ಮೇಲಿದೆ, ಹತ್ತು ವರ್ಷಗಳ ಹಿಂದೆ ಭಾರತ ದೇಶ ಹೇಗೆ ಇತ್ತು ಈಗ ಹೇಗಿದೆ ಎಂಬುದು ನೋಡಬೇಕಾಗಿದೆ. 140 ಕೋಟಿ ಜನಸಂಖ್ಯೆ ಇರುವ ಭಾರತ ಇಂದು ಆರ್ಥಿಕ ಅಭಿವೃದ್ಧಿಯಲ್ಲಿ 5ನೇ ಸ್ಥಾನದಲ್ಲಿದೆ ಮುಂಬರುವ ದಿನಗಳಲ್ಲಿ ಮೂರನೇ ಸ್ಥಾನದಲ್ಲಿ ಬರಲಿದೆ.   ಹಳ್ಳಿಹಳ್ಳಿಗೂ ಗ್ಯಾಸ್ ಸೌಲಭ್ಯ, ರಸ್ತೆ, ನೀರು, ಶೌಚಾಲಯ ಸೇರಿದಂ ತೆ ಮೂಲಭೂತ ಸೌಲಭ್ಯಗಳನ್ನು ಒದಸಲಾಗಿದೆ. ವಿಕಸಿತ ಭಾರತ ಎಂಬುವುದು ನಮ್ಮ ಕನಸಲ್ಲ ಅದೊಂದು ಸಂಕಲ್ಪವಾಗಿದೆ. ಇಂದಿನ ಯುವ ಸಮೂಹದಲ್ಲಿ ವಿಕಸಿತ ಭಾರತ ಸಾರ್ಥಕವಾಗಿಸುವ ಶಕ್ತಿಯಿದೆ ಎಂದು ಹೇಳಿದರು. ಇದೇ ಗೌರವಾನ್ವಿತ ಉಪ ರಾಷ್ಟ್ರಪತಿಗಳು ಹಾವೇರಿಯ ವೈಶಿಷ್ಟ್ಯತೆ ಕುರಿತ “ವರದೇಯ ಶಾರದೆ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.   

ಕರ್ನಾಟಕ ಗೌರವಾನ್ವಿತ ರಾಜ್ಯಪಾಲರಾದ   ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿ, ಕರ್ನಾಟಕ ಕಲೆ, ಸಾಹಿತ್ಯ,  ಸಂಸ್ಕತಿ ಕರ್ನಾಟಕ ವೈಭವ ಕಾರ್ಯಕ್ರಮದ ಮೂಲಕ ಅನಾವರಣಗೊಳಿಸುತ್ತಿರುವುದು ಅತ್ಯಂತ ಪ್ರಶಂಸನೀಯವಾಗಿದೆ.  ಕನ್ನಡ ಭಾಷೆ ಹಾಗೂ ಸಾಹಿತ್ಯ ಸಮೃದ್ಧವಾಗಿದೆ.  ಭಾರತ ದೇಶದ  ಹಾಗೂ ಕರ್ನಾಟಕದ ಸಂಸ್ಕತಿ ಒಂದೇ ಆಗಿದೆ.   ಭಾರತ ವಿವಿಧತೆಯಲ್ಲಿ ಏಕತೆ ಕಾಣಬಹುದು.  ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರು ಅಪಾರ  ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.  

ಹರಿಹರ ಹರಕ್ಷೇತ್ರದ ವಚನಾನಂದ ಸ್ವಾಮೀಗಳು ಸಾನಿಧ್ಯ ವಹಿಸಿದ್ದರು,  ಗೌರವಾನ್ವಿತ ಉಪ ರಾಷ್ಟ್ರಪತಿಗಳ ಧರ್ಮಪತ್ನಿ   ಸುದೇಶ, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ,  ಬಿ.ಎಲ್‌. ಸಂತೋಷ,   ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್‌.ವಿ.ಹಲಸೆ,  ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಹ ಸಂಯೋಜಕ ರಘುನಂದನ,  ಕೆ.ಎನ್‌.ಪಾಟೀಲ ಉಪಸ್ಥಿತರಿದ್ದರು.