ಬಳ್ಳಾರಿ ಜಿಲ್ಲೆಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಸದಸ್ಯರ ಭೇಟಿಜಿಲ್ಲಾ ಆಸ್ಪತ್ರೆ, ಕೇಂದ್ರ ಕಾರಾಗೃಹ, ನಿರಾಶ್ರಿತ ಪರಿಹಾರ ಕೇಂದ್ರ, ಬಿಮ್ಸ್ ಆಸ್ಪತ್ರೆಯಲ್ಲಿನ ಸ್ಥಿತಿಗತಿ ಪರೀಶೀಲನೆ
ಬಳ್ಳಾರಿ 09:ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು, ಗುರುವಾರ ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆ, ಜಿಲ್ಲಾ ಕೇಂದ್ರ ಕಾರಾಗೃಹ, ಬಿಮ್ಸ್ ಆಸ್ಪತ್ರೆ, ಸರ್ಕಾರಿ ಬುದ್ಧಿಮಾಂದ್ಯ ಬಾಲಕರ ಬಾಲಮಂದಿರ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
*ಜಿಲ್ಲಾ ಆಸ್ಪತ್ರೆ:*ಮೊದಲಿಗೆ ಜಿಲ್ಲಾ ಆಸ್ಪತ್ರೆ ಆವರಣದ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಒಬಿಜಿ ವಾರ್ಡ್, ಪ್ರಸೂತಿ ವಿಭಾಗದ ಮುಂದೆ ಇದ್ದ ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಕ್ಷೇಮ ವಿಚಾರಿಸಿದರು. ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ? ಆರೋಗ್ಯ ಸೇವೆ ಒದಗಿಸುವಲ್ಲಿ ವಿಳಂಬ ತೋರುತ್ತಿದ್ದಾರೆಯೇ? ಎಂದು ವಿಚಾರಿಸಿದರು.
ಹೆರಿಗೆ ಕೋಣೆಗೆ ಭೇಟಿದ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು, ಹೆರಿಗೆ ವಾರ್ಡ್‌ಗಳಲ್ಲಿ ಸ್ವಚ್ಛತೆ ಆದ್ಯತೆ ನೀಡುವಂತೆ ಸೂಚಿಸಿದರು. ಬಳಿಕ ಓಷಧಿ ವಿತರಣಾ ವಿಭಾಗಕ್ಕೆ ಭೇಟಿ ನೀಡಿ, ವಿವಿಧ ರೀತಿಯ ಎಲ್ಲಾ ಓಷಧಿಗಳು ಲಭ್ಯವಿದೆಯೇ? ಅವಧಿ ಮೀರಿದ ಓಷಧಿಗಳನ್ನು ವಿತರಿಸುವಂತಿಲ್ಲ ಎಂದು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.*ಜಿಲ್ಲಾ ಕೇಂದ್ರ ಕಾರಾಗೃಹ:*ನಗರದ ಎಸ್.ಪಿ ಕಚೇರಿ ಹಿಂಭಾಗದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರೀಶೀಲನೆ ನಡೆಸಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಜೈಲಿನಲ್ಲಿರುವ ವಿಚಾರಾಣಾಧೀನ ಕೈದಿಗಳ ಮೂಲಭೂತ ಹಕ್ಕುಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಕಾರಾಗೃಹದಲ್ಲಿನ ಊಟ ತಯಾರಿಕಾ ಸ್ಥಳ ಅಡುಗೆ ಕೋಣೆ ಸೇರಿದಂತೆ ಹಲವೆಡೆ ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.ವಿಚಾರಣಾದೀನಾ ಕೈದಿಗಳಿಗೆ ನೀಡುವ ಉಪಹಾರ, ಊಟ, ಕುಡಿಯುವ ನೀರಿನ ಗುಣಮಟ್ಟದ ಕುರಿತು ಚರ್ಚಿಸಿದ ಅವರು, ವೇಳಾಪಟ್ಟಿಯಂತೆ ಆಹಾರ ವಿತರಣೆ ಮಾಡಲಾಗುತ್ತಿದೆಯೇ ಎಂದು ವಿಚಾರಿಸಿ ಮಾಹಿತಿ ಪಡೆದುಕೊಂಡರು.
ಜೈಲಿನ ಸುರಕ್ಷತೆ ಕುರಿತು ಮಾಹಿತಿ ಪಡೆದ ಅಧ್ಯಕ್ಷರು, ಜೈಲಿನಲ್ಲಿ ಸಿಸಿ ಕ್ಯಾಮೆರಾ ಸಂಖ್ಯೆ ಹೆಚ್ಚಿಸಲು ಸಲಹೆ ನೀಡಿದರು, ಅಲ್ಲದೆ ಅನಾರೋಗ್ಯಕ್ಕೆ ತುತ್ತಾಗುವ ಜೈಲುವಾಸಿಗಳು ಓಷಧಿಯನ್ನು ಸಿಬ್ಬಂದಿಗಳ ಸಮಕ್ಷಮವೇ ಸೇವಿಸಬೇಕು, ಓಷಧಿ ಸೇವಿಸದೆ, ಹಾಗೆಯೇ ಇರಿಸಿಕೊಂಡು, ಒಂದೇ ಬಾರಿ ಎಲ್ಲ ಓಷಧಿ ಸೇವಿಸಿದರೂ ಕೂಡ ಅವರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಕಾರಾಗೃಹದಲ್ಲಿ ಧ್ಯಾನ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಬೇಕು, ಜೈಲುವಾಸಿಗಳ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜೈಲು ಅಧೀಕ್ಷಕರಾದ ಲತಾ ಅವರು ಉಪಸ್ಥಿತರಿದ್ದು, ಜೈಲಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಜೈಲಿನಲ್ಲಿದ್ದ ವಿವಿಧ ಪ್ರಕರಣಗಳಲ್ಲಿ ಜೈಲುವಾಸಿಗಳಾಗಿರುವ ಕೈದಿಗಳನ್ನು ಭೇಟಿಯಾಗಿ, ಕೈದಿಗಳಿಗೆ ಕಾನೂನು ನೆರವು ದೊರೆಯುತ್ತಿರುವ ಬಗ್ಗೆ, ಊಟೋಪಹಾರದ ಬಗ್ಗೆ ಜೈಲಿನ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ಪಡೆದ ಆಯೋಗದ ಅಧ್ಯಕ್ಷರು ಹಾಗೂ ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಗೋಡಿ ಅವರು, ಜೈಲಿನಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಿಸುವುದು ಹಾಗೂ ಕಿಟಕಿಗಳಿಗೆ ಸೊಳ್ಳೆಗಳು ಜೈಲು ಕೋಣೆಗಳನ್ನು ಪ್ರವೇಶಿಸದಂತೆ ಪರದೆಯನ್ನು ಹಾಕಿಸಲು ಸಲಹೆ ನೀಡಿದರು.*ಬಿಮ್ಸ್ ಆಸ್ಪತ್ರೆ:*ಬಳಿಕ, ಬಳ್ಳಾರಿ ವೈದ್ಯಕೀಯ ಸಂಶೋಧನಾ ಮಹಾವಿದ್ಯಾಲಯ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಹೊರರೋಗಿ ಮತ್ತು ಒಳರೋಗಿಗಳ ಬಳಿ ಸಂವಾದ ನಡೆಸಿದರು. ಆರೋಗ್ಯ ಸೇವೆ ನೀಡುವಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆಯೇ? ಎಂದು ವಿಚಾರಿಸಿದರು. ಬಳಿಕ ಬಿಮ್ಸ್‌ನ ಹೆರಿಗೆ ಕೋಣೆ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದರು.*ಬುದ್ಧಿಮಾಂದ್ಯ ಬಾಲಕರ ಸರ್ಕಾರಿ ಬಾಲಮಂದಿರ:*
ನಗರದ ಕಂಟೋನ್‌ಮೆಂಟ್‌ನ ಶಾಂತಿಧಾಮ ಆವರಣದ ಬುದ್ಧಿಮಾಂದ್ಯ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಭೇಟಿ ನೀಡಿದರು.ಬಾಲಮಂದಿರದಲ್ಲಿ ದಾಖಲಾದ ಮಕ್ಕಳ ವಿವರ ಪಡೆದುಕೊಂಡರು. ಮಕ್ಕಳನ್ನು ಕಾಲಾನುಮಿತಿಯಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು. ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಬಾಲಮಂದಿರವನ್ನು ಸ್ವಚ್ಛವಾಗಿರಿಸಬೇಕು, ರಕ್ಷಣೆ ಸೇವೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗಬಾರದು ಎಂದು ಬಾಲಮಂದಿರದ ಅಧೀಕ್ಷಕರಿಗೆ ಸೂಚಿಸಿದರು.*ನಿರಾಶ್ರಿತರ ಪರಿಹಾರ ಕೇಂದ್ರ:*
ಬಳಿಕ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು, ಶಾಂತಿಧಾಮ ಆವರಣದ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತ ಪರಿಹಾರ ಕೇಂದ್ರದ ಪುರುಷರ ವಿಭಾಗ ಹಾಗೂ ಮಹಿಳಾ ವಿಭಾಗಕ್ಕೆ ಭೇಟಿ ನೀಡಿ ವೀಕ್ಷಿಸಿದರು.ಊಟ, ವಸತಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ವಿಚಾರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಇದೇ ವೇಳೆ ಆಪ್ತ ಕಾರ್ಯದರ್ಶಿ ಅರುಣ ಪೂಜಾರ ಅವರು ಅಧ್ಯಕ್ಷರೊಂದಿಗೆ ಉಪಸ್ಥಿತರಿದ್ದು, ಹಲವಾರು ಉಪಯುಕ್ತ ಸಲಹೆ ಸೂಚನೆಗಳನ್ನು ಇಲಾಖಾಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ತಹಶೀಲ್ದಾರ ಗುರುರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.