ಕೊಪ್ಪಳಕ್ಕೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯರ ಭೇಟಿ: ಸಂವಾದ ಸಮಗ್ರ

Karnataka Regional Imbalance Redressal Committee members visit Koppal: Comprehensive discussion

ಕೊಪ್ಪಳಕ್ಕೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯರ ಭೇಟಿ: ಸಂವಾದ ಸಮಗ್ರ

ಕೊಪ್ಪಳ 08: ಸಮಗ್ರ, ಸಮತೋಲನ ಅಭಿವೃದ್ಧಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ವಿತ್ತೀಯ ಸುಧಾರಣೆ ಮತ್ತು ಯೋಜನ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ವಿಶಾಲ್‌.ಆರ್ ಹೇಳಿದರು. ಅವರು ಮಂಗಳವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್‌.ಪಟೇಲ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಕೊಪ್ಪಳ ಜಿಲ್ಲಾ ಮಟ್ಟದ ಸಂವಾದ ಸಭೆಯಲ್ಲಿ ಮಾತನಾಡಿದರು.  ಡಾ. ಡಿ.ಎಂ.ನಂಜುಂಡಪ್ಪ ವರದಿಯು ಸುಮಾರು 22 ವರ್ಷಗಳಷ್ಟು ಹಳೆಯಾದಾಗಿರುವುದರಿಂದ ಹಾಗೂ ಕರ್ನಾಟಕದಲ್ಲಿ ಹಿಂದೆ ಇದ್ದ 175 ತಾಲ್ಲೂಕುಗಳ ಬದಲು ಪ್ರಸ್ತುತ 240 ತಾಲ್ಲೂಕುಗಳಾಗಿರುವುದರಿಂದ 2023ರ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಅದರಂತೆ ಡಾ. ಡಿ.ಎಂ ನಂಜುಂಡಪ್ಪ ವರದಿಯ ಅನುಷ್ಠಾನದಿಂದ ತಾಲ್ಲೂಕುಗಳು ಅಭಿವೃದ್ಧಿ ಹೊಂದಿರುವ ಬಗ್ಗೆ ಹಾಗೂ ಅಭಿವೃದ್ಧಿ ಹೊಂದದೆ ಇರುವ ತಾಲ್ಲೂಕುಗಳನ್ನು ಗುರುತಿಸಿ ಹೊಸದಾಗಿ ಸೂಚ್ಯಾಂಕವನ್ನು ಕಂಡು ಹಿಡಿದು ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಲು ರಾಜ್ಯ ಸರ್ಕಾರವು ಆರ್ಥಿಕ ತಜ್ಞರಾದ ಪ್ರೊ. ಎಂ. ಗೋವಿಂದರಾವ್ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದರು. ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಡಾ. ಡಿ.ಎಂ.ನಂಜುಂಡಪ್ಪ ವರದಿಯ ಪುನರ್ ವಿಮರ್ಶೆ ಮಾಡುವುದರ ಜೊತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸ್ಸುಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು 40 ರಿಂದ 50 ಸೂಚ್ಯಂಕಗಳನ್ನು ಪಟ್ಟಿ ಮಾಡಿಕೊಂಡಿದ್ದು, ಅವುಗಳ ಆಧಾರದ ಮೇಲೆ ವಿಸ್ತೃತವಾಗಿ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸ್ಸು ಮಾಡಲಿದೆ. ಸರಕಾರದ ವತಿಯಿಂದ ಅನುದಾನ ಘೋಷಣೆ ಜತೆಗೆ ಖಾಸಗಿ ವಲಯಗಳಾದ ಕೈಗಾರಿಕೆ, ಆಹಾರ ಸಂಸ್ಕಾರಣೆ ಮತ್ತಿತರ ಕ್ಷೇತ್ರಗಳಿಗೆ ಯಾವ ರೀತಿಯ ಉತ್ತೇಜನ ನೀಡಬೇಕು ಎಂಬುದನ್ನು ಅರಿತುಕೊಂಡು ಆ ಅಂಶಗಳನ್ನು ವರದಿಯಲ್ಲಿ ಅಳವಡಿಸಲಾಗುವುದು. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ಭೇಟಿ ನೀಡಿ, ಆಯಾ ಭಾಗದ ಜನರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಈ ಸಭೆಯಲ್ಲಿ ಸಚಿವರು, ಸಂಸದರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದ್ದಕ್ಕಾಗಿ ಅಭಿನಂಧನೆ ಸಲ್ಲಿಸುತ್ತೇನೆ ಎಂದು ಹೇಳಿದರು.   ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯರಾದ ಎಸ್‌.ಟಿ ಬಾಗಲಕೋಟಿ ಅವರು ಮಾತನಾಡಿ, ಕೆಲವು ಐತಿಹಾಸಿಕ, ಭೌಗೋಳಿಕ, ಮಾನವ ನಿರ್ಮಿತ ಕಾರಣಗಳಿಂದಾಗಿ ಪ್ರದೇಶಗಳ ಅಭಿವೃದ್ಧಿ ಹಾಗೂ ಬೆಳವಣಿಗೆ ಭಿನ್ನವಾಗಿರುತ್ತದೆ. ಅಮೇರಿಕ ಇದ್ದಂತೆ ಭಾರತ ಇಲ್ಲ: ಗುಜರಾತ ಇದ್ದಂತೆ ಬಿಹಾರ ಇಲ್ಲ; ಮಂಗಳೂರು ಇದ್ದಂತೆ ಕೊಪ್ಪಳ ಇಲ್ಲ: ಗಂಗಾವತಿ ಇದ್ದಂತೆ ಯಲಬುರ್ಗಾ ಇಲ್ಲ; ಗಿಣಿಗೇರಾ ಇದ್ದಂತೆ ಬೂದಗುಂಪ ಇಲ್ಲ. ತೀವ್ರ ಅಸಮಾನತೆ ಜಟಿಲ ಹಾಗೂ ಅಸಮಾಧಾನಕರ ಪರಿಸ್ಥಿತಿಗೆ ಕಾರಣವಾಗುತ್ತದೆ. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಹಲವಾರು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿಯ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು, ಸಂಗ-ಸಂಸ್ಥೆಗಳು, ಇತರೆ ಮುಖಂಡರು ಹಾಗೂ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ವರದಿ ಮಾಡಲಾಗುತ್ತಿದೆ ಎಂದರು.   ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಹಳೆ ಮೈಸೂರು ಭಾಗದಂತೆ ನಮ್ಮ ಭಾಗ ಅಭಿವೃದ್ಧಿಯಾಗಿಲ್ಲ. ಯಾದಗಿರಿ ಜಿಲ್ಲೆ ಶಿಕ್ಷಣ ಹಾಗೂ ಮಹಿಳಾ ಸಾಕ್ಷರತೆಯಲ್ಲಿ ಬಹಳ ಹಿಂದುಳಿದ ಜಿಲ್ಲೆ. ಅದನ್ನು ಬಿಟ್ಟರೆ ಕೊಪ್ಪಳ ಜಿಲ್ಲೆ ಬರುತ್ತದೆ. ನಂಜುಂಡಪ್ಪ ವರದಿ ಬಂದ ನಂತರ ರಾಜ್ಯ ಸರ್ಕಾರ ಬೋರ್ಡ್‌ ರಚನೆ ಮಾಡಿತು. 371 ಜೆ ಆದ ನಂತರ ಈ ಭಾಗಕ್ಕೆ ಹೆಚ್ಚು ಹಣ ಕೊಡಲು ಅನುಕೂಲವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ 5 ಸಾವಿರ ಕೋಟಿ ಹಣವನ್ನು ನೀಡಲಾಗುತ್ತಿದೆ. ನಮ್ಮ ಭಾಗ ಶಿಕ್ಷಣದಲ್ಲಿ ಬಹಳ ಹಿಂದಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಒತ್ತು ನೀಡಬೇಕು ಈ ಭಾಗದ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಡಾಕ್ಟರ್‌ಗಳು ಬರುತ್ತಿಲ್ಲ. ಅವರು ಇಲ್ಲಿ ಬಂದು ಕೆಲಸ ಮಾಡಲು ವಿಶೇಷ ಭತ್ಯಗಳ ಜೊತೆಗೆ ಇತರೆ ಸೌಲಭ್ಯಗಳನ್ನು ನೀಡಬೇಕು. ಈ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ವಿಶೇಷ ಒತ್ತು ನೀಡಬೇಕು. ಕೃಷಿ ಕ್ಷೇತ್ರವು ಬಹಳ ಮುಖ್ಯವಾಗಿದೆ. ಆರ್ಥಿಕತೆ ಹೇಗೆ ಹೆಚ್ವಿಸಬೇಕೆಂದು ಯೋಜನೆ ರೂಪಿಸಬೇಕು. ಕಳಪೆ ಕಾಮಗಾರಿಗಳಿಂದ ಶಾಲಾ-ಕಟ್ಟಡಗಳು ಹತ್ತು ವರ್ಷಗಳಲ್ಲಿ ಬಿದ್ದು ಹೋಗುತ್ತಿವೆ. ಆದರೆ ನಾವು ಕಲಿತ ಅಂದಿನ ಶಾಲೆಗಳು ಇನ್ನು ಇವೆ. ರಸ್ತೆಗಳು ಗುಣಮಟ್ಟದಲ್ಲಿ ಇಲ್ಲದ ಕಾರಣ ಕೆಲವೆ ವರ್ಷಗಳಲ್ಲಿ ಅವು ಹಾಳಾಗಿ ಹೋಗುತ್ತಿವೆ ಎಂದರು. ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಮಾತನಾಡಿ, ನಂಜುಂಡಪ್ಪ ವರದಿ ನಂತರ ಇನ್ನೂ ಬಹಳಷ್ಟು ಅಭಿವೃದ್ಧಿ ಆಗಬೇಕಿದೆ. ಹಿಂದುಳಿದಿರಲು ಬಹಳಷ್ಟು ಕಾರಣಗಳು ಇವೆ. ತ್ವರಿತವಾಗಿ ಅಭಿವೃದ್ಧಿಯಾಗಬೇಕಾದರೆ ಹೆಚ್ಚಿನ ಹಣ ಕೊಡಬೇಕು. ನೀರಾವರಿ. ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ನಮ್ಮಲ್ಲಿ ಆಸ್ಪತ್ರೆಗಳಿದ್ದರು ಅಲ್ಲಿ ಕೆಲಸ ಮಾಡಲು ಡಾಕ್ಟರಗಳು ಬರಲು ಹಿಂದೇಟು ಹಾಕುತ್ತಾರೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮಾತನಾಡಿ, ನಮ್ಮ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಬಹಳ ಹಿಂದುಳಿದಿದೆ. 7 ಸಾವಿರ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರುವದಿಲ್ಲ. ಅವರು ಎಸ್‌.ಎಸ್‌.ಎಲ್‌.ಸಿ ವರೆಗೆ ಹೇಗೆ ಬಂದರು ಎಂದು ಆಶ್ವರ್ಯ ಆಗುತ್ತದೆ. ಅಪೌಷ್ಟಿಕತೆ ಹೆಚ್ಚಿರುವುದರಿಂದ 25 ರಿಂದ 30 ವರ್ಷದೊಳಗಿನ ಬಾಣಂತಿಯರ ಸಾವು ಆಗುತ್ತಿದೆ. ಆಸ್ಪತ್ರೆಗಳಲ್ಲಿ ಮಹಿಳಾ ಡಾಕ್ಟರಗಳ ಕೊರತೆ ಇದೆ. ಸರಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಚತಾ ವ್ಯವಸ್ಥೆ ಸರಿಯಾಗಿ ಇಲ್ಲ. ನಾನು ಎಸ್‌.ಸಿ. ಎಸ್ಟಿ ಹಾಗೂ ಓಬಿಸಿ ಸೇರಿದಂತೆ ಹಲವಾರು ವಸತಿ ನಿಲಯಗಳಿಗೆ ಭೇಟಿ ನೀಡಿದ್ದೆನೆ. ಅಲ್ಲಿ ವ್ಯವಸ್ಥೆ ಇನ್ನೂ ಸರಿಯಾಗಿ ಆಗಬೇಕಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಮಾತನಾಡಿ, ಹವಮಾನ ಬದಲಾವಣೆ ಕುರಿತ ಇಕೋ ಸಿಸ್ಟಮ್‌ಗೆ ಒತ್ತು ನೀಡಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪಿಯುಸಿ, ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಎಂದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗದ ವಿವಿಧ ಇಲಾಖೆಗಳಲ್ಲಿ ಅಧಿಕಾರಿ, ಸಿಬ್ಬಂದಿಗಳ ಕೊರತೆಯಿದ್ದು, ಈ ಸಮಸ್ಯೆ ಸರಿಯಾಗಬೇಕು. ಈ ಭಾಗದಲ್ಲಿ ನೇಮಕವಾಗುವ ನೌಕರರು ಕನಿಷ್ಠ 2 ರಿಂದ 3 ವರ್ಷಗಳ ಕಾಲ ಸೇವೆ ಮಾಡುವಂತಾಗಬೇಕು ಹಾಗೂ ಈ ಭಾಗದ ಅಭಿವೃದ್ಧಿಗಾಗಿ ದೀರ್ಘಾವಧಿ ಯೋಜನೆಗಳ ಅವಶ್ಯಕತೆಯಿದೆ ಎಂದು ಹೇಳಿದರು.    ಮುಖಂಡರ ಸಲಹೆ: ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆಯಾಗಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತೋಟಗಾರಿಕೆ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕದ ಭಾಗದ ರಫ್ತು ಕೇಂದ್ರವನ್ನು ಕೊಪ್ಪಳ ಜಿಲ್ಲೆಯಲ್ಲಿ ಆರಂಭಿಸಬೇಕು. ವಿವಿಧ ಯೋಜನೆಗಳಡಿ ಬಾಕಿ ಉಳಿಯುವ ಅನುದಾನವನ್ನು ಮುಂದಿನ ವರ್ಷದಲ್ಲಿ ಬಳಕೆಯಾಗಬೇಕು. ಪ್ರಾದೇಶಿಕ ವಿಭಾಗದ ಉಪ ಕಚೇರಿಯನ್ನು ಕೊಪ್ಪಳದಲ್ಲಿ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ವಲಸೆ ತಡೆಗೆ ವಿಶೇಷ ಕ್ರಮ ಕೈಗೊಳ್ಳಬೇಕು. ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಅತ್ಯವಶ್ಯಕವಾಗಿದೆ. ಇದಕ್ಕಾಗಿ ಯಾವುದೇ ರೀತಿಯ ಮೂಲ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದರ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ, ಮುಖಂಡರಾದ ಯಂಕಣ್ಣ ಯರಾಶಿ, ದೇವೇಂದ್ರ​‍್ಪ ಬಳೂಟಗಿ, ಶರಣಪ್ಪ ದೊಡ್ಡಮನಿ, ವಿರೇಶ ಸೇರಿದಂತೆ ಇತರೆ ರೈತ ಮುಖಂಡರು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.