ಕಳೆದುಕೊಂಡ ವಸ್ತು ಮರಳಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಕಳೆದುಕೊಂಡ ವಸ್ತು ಮರಳಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ KSRTC staff who returned the lost item and showed honesty

 ರಾಣೇಬೆನ್ನೂರ, ಡಿ.15: ರಾಣೇಬೆನ್ನೂರ ಘಟಕದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕಿಯ ಪ್ರಾಮಾಣಿಕತೆಯಿಂದಾಗಿ ಕೃಷಿ ಚಟುವಟಿಕೆಗಾಗಿ ಖರೀದಿಸಿದ್ದ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ಕಳೆದುಕೊಂಡಿದ್ದ ರೈತನೋರ್ವನು ಮರಳಿ ಪಡೆದ ಹೃದಯಸ್ಪರ್ಶಿ ಘಟನೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ. ನೂಕಾಪುರ ಗ್ರಾಮದ ರಾಜು ವಡೆಯರ ಎಂಬ ರೈತ ರವಿವಾರದಂದು ರಾಣೇಬೆನ್ನೂರಿನಲ್ಲಿ ಕೃಷಿ ಚಟುವಟಿಕೆಗೆ ನೀರು ಹಾಯಿಸಲು ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ಖರೀದಿಸಿ ರಾಣೇಬೆನ್ನೂರಿನಿಂದ ಚೌಡಯ್ಯದಾನಪುರ ಮಾರ್ಗವಾಗಿ ಗುತ್ತಲಕ್ಕೆ ಚಲಿಸುವ ಬಸ್ ಹತ್ತಿದ್ದರು, ತಮ್ಮ ಊರಾದ ನೂಕಾಪುರ ಬರುತ್ತಿದ್ದಂತೆ ಬಹುಮುಖ್ಯವಾಗಿದ್ದಉಪಕರಣಗಳನ್ನು ಮರೆತು ಕೆಲ ಲಗೇಜ್ ಗಳನ್ನು ತೆಗೆದುಕೊಂಡು ಅವಸರದಿಂದ ಇಳಿದಿದ್ದಾರೆ.

ನಂತರ ಸಂಜೆಯಾದ ಮೇಲೆ ಉಪಕರಣಗಳ ನೆನಪಾಗಿ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ.ನಂತರ ನಿರ್ವಾಹಕಿ ಸಬೀನಾ ಎನ್ ಅವರ ನಂಬರ್ ಪಡೆದುಕೊಂಡು ದೂರವಾಣಿ ಕರೆ ಮಾಡಿದಾಗ ವೇಳೆ ನಿರ್ವಾಹಕಿ ಸಬೀನಾ ಅವರು ತಕ್ಷಣವೇ ಸ್ಪಂದಿಸಿ ಮೋಟಾರ್  ಆಸನದ ಕೆಳಗಡೆ ಇತ್ತು ತೆಗೆದುಕೊಂಡಿದ್ದೇವೆ ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಇದನ್ನು ಕೇಳಿದ  ರೈತ ರಾಜು ವಡೆಯರ ನೀರಾಳರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಚಾಲಕ ಪ್ರಕಾಶ ಹೆಗ್ಗೋಳ ಮತ್ತು ನಿರ್ವಾಹಕಿ ಸಬೀನಾ ಎನ್ ಅವರು ಚೌಡಯ್ಯದಾನಪುರ ಗ್ರಾಮದಲ್ಲಿ ಬೆಲೆಬಾಳುವ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ರೈತ ರಾಜು ವಡೆಯರ ಅವರಿಗೆ ಮರಳಿಸಿದರು.  ತಮ್ಮ ಕರ್ತವ್ಯದ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮೆರೆದ ಈ ಇಬ್ಬರೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಗ್ರಾಮಸ್ಥರು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.