ಸೋತ ಅನರ್ಹರು ಮಂತ್ರಿಯಾಗಲ್ಲ: ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ

Iswarappa

ಬೆಂಗಳೂರು, ಡಿ.6- ರಾಜ್ಯದ ಅತಂತ್ರ ರಾಜಕಾರಣಕ್ಕೆ ಡಿಸೆಂಬರ್ 9ರಂದು ಮುಕ್ತಿ ಸಿಗಲಿದೆ. ಅಭಿವೃದ್ಧಿ ದೃಷ್ಟಿಯಿಂದ ಮೂರೂವರೇ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು ಎಂಬುದು ಜನರ ಅಭಿಪ್ರಾಯ ಕೂಡ ಆಗಿತ್ತು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದುವರಿಯಲಿದೆ. ಉಪ ಚುನಾವಣೆ ನಡೆದ ಎಲ್ಲಾ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನರ್ಹರು ರಾಜೀನಾಮೆ ಕೊಡದಿದ್ದರೆ ನಮ್ಮ ಸರ್ಕಾರ ಬರುತ್ತಿರಲಿಲ್ಲ. ಹೀಗಾಗಿ ಅವರ ಋಣ ತೀರಿಸಬೇಕಿದೆ. ಯಾವುದೇ ಕಾರಣಕ್ಕೂ ಅವರಿಗೆ ನಾವು ಅನ್ಯಾಯ ಮಾಡುವುದಿಲ್ಲ, ಗೆದ್ದ ಎಲ್ಲರನ್ನು ಮಂತ್ರಿ ಮಾಡಲಾಗುವುದು. ಆದರೆ ಸೋತವರಿಗೆ ಏನೂ ಕೊಡಲು ಸಾಧ್ಯವಾಗುವುದಿಲ್ಲ. ಈಗಾಗಲೇ ಅವರಿಗೆ ವಿಷಯವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಮಾಡುವುದಾಗಿ ಹೇಳಿದ್ದೇವೆ. ಆದರೆ ಅವರು ಕೇಳಲಿಲ್ಲ.  ನಾವು ವಿಧಾನಸಭೆಗೆ ಆಯ್ಕೆಯಾಗಿಯೇ ಮಂತ್ರಿಯಾಗುತ್ತೇವೆ ಎಂದು ಚುನಾವಣೆಗೆ ಹೋಗಿದ್ದಾರೆ. ಹೀಗಾಗಿ ಅವರು ಗೆದ್ದರೆ ಮಾತ್ರ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿಯ ಎಲ್ಲಾ ಅನರ್ಹರನ್ನು ಮಂತ್ರಿ ಮಾಡುತ್ತೇವೆ. ಈಗಾಗಲೇ ಲಕ್ಷ್ಮಣ್ ಸವದಿ ಅವರ ವಿಷಯ ಕೂಡ ತೀರ್ಮಾನವಾಗಿದೆ. ಅವರು ಮಂತ್ರಿಯಾಗಿಯೇ ಮುಂದುವರಿಯುತ್ತಾರೆ. ಅಲ್ಲಿ ಚುನಾವಣೆಯಲ್ಲಿ ಗೆಲ್ಲುವ ಎಲ್ಲಾ ಅನರ್ಹರನ್ನು ಮಂತ್ರಿ ಮಾಡುತ್ತೇವೆ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರು ಮಂತ್ರಿಯಾಗಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಎಲ್ಲಾ ಗ್ರಾಮ ಪಂಚಾಯತಿ ಗಳಲ್ಲಿ ವಿಶೇಷವಾದ ಯೋಜನೆ ರೂಪಿಸಲಾಗಿದೆ. ಪ್ರತಿ ಪಂಚಾಯ್ತಿಗೂ ಈಗಾಗಲೇ ಕೇಂದ್ರ ಸರ್ಕಾರದಿಂದ 20 ಲಕ್ಷ ರೂ. ಬಿಡುಗಡೆ ಮಾಡಿದೆ. ರಾಜ್ಯದ 6021 ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಜಾರಿಗೆ ತಂದು, ಕಸದ ಸಮಸ್ಯೆ ಇಲ್ಲದ ರೀತಿ ಕೆಲಸ ಮಾಡಲಾಗುವುದು. ರಾಜ್ಯದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೋಲಾರ್ ಅಳವಡಿಕೆ, ಕಟ್ಟಡಗಳಿಗೆ, ಬೀದಿ ದೀಪಗಳಿಗೆ ಸೋಲಾರ್ ಅಳವಡಿಕೆ ಯೋಜನೆಗೆ ಇಲಾಖೆ ಒತ್ತು ನೀಡುತ್ತಿದೆ. ಶಾಸಕರ ನಿಧಿಯಿಂದ ಸೋಲಾರ್ ಗೆ ಹಣ ನೀಡುವಂತೆ ಕೋರಲಾಗುವುದು. ಜಲಾಮೃತ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಆರಂಭಿಕವಾಗಿ ಜಲಾಮೃತ ಯೋಜನೆಯನ್ನು ಕೋಲಾರ ,ಬಿಜಾಪುರ,  ರಾಮನಗರ, ಜಿಲ್ಲೆ ಗಳಲ್ಲಿ ಜಾರಿಗೆ ತರಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.