'ಕೈ-ಜೆಡಿಎಸ್ ಸಮ್ಮಿಶ್ರ ಸರಕಾರ ಸಂಪೂರ್ಣ ವಿಫಲ, 6 ತಿಂಗಳ ಸಾಧನೆ ಕಳಪೆ'

ಬೆಂಗಳೂರು,ನ.24- ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸಕರ್ಾರ ಜನತೆಯ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕಳೆದ 6 ತಿಂಗಳ ಸಾಧನೆ ಕಳಪೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ  ಟೀಕಿಸಿದರು. 

ಸಕರ್ಾರದ ರಚನೆಯಾದಾಗ ಜನತೆಗೆ ನೀಡಿದ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಕಾರ್ಯಕ್ರಮಗಳು ಕೇವಲ ಘೋಷಣೆಗೆ ಸೀಮಿತವಾಗಿದೆ ಹೊರತು ಅನುಷ್ಠಾನಗೊಂಡಿಲ್ಲ. ಸಮ್ಮಿಶ್ರ ಸಕರ್ಾರ ಎಲ್ಲ  ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ದೂರಿದರು. 

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರೈತರು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ಗಳಲಿ ಪಡೆದಿರುವ ಸಾಲ ಮನ್ನಾ  ಇದುವರೆಗೂ ಮನ್ನಾ ಆಗಿಲ್ಲ. ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ಹೊಸದಾಗಿ ಸಾಲವನ್ನೂ ಸಹ ನೀಡುತ್ತಿಲ್ಲ. ಸಕರ್ಾರ ಇದೆಯೋ ಇಲ್ಲವೇ ಎಂಬುದು ಅನುಮಾನ ಜನರಲ್ಲಿ ಮೂಡಿದೆ ಎಂದು ವ್ಯಂಗ್ಯವಾಡಿದರು. 

ನೂರು ತಾಲ್ಲೂಕುಗಳನ್ನು ಬರ ಪೀಡಿತ ಸಕರ್ಾರವೇ ಘೋಷಣೆ ಮಾಡಿದೆ.ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದೆ ಪರದಾಡುವಂತಾಗಿದೆ.ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದೆ ಜನರು ಗುಳೇ ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಗಳು  ಎಲ್ಲಿಯೂ ಕೂಡ ಪ್ರವಾಸ ಮಾಡುತ್ತಿಲ್ಲ. ಕಡೆ ಪಕ್ಷ ವಿಧಾನಸೌಧದಲ್ಲಾದರೂ ಕುಳಿತುಕೊಂಡು ಸಭೆ ನಡೆಸುವ  ವ್ಯವಧಾನ ಇಲ್ಲ. ಈ ಸಕರ್ಾರ ಜನರಿಗೆ ಇದ್ದು ಸತ್ತಾಂಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  1,87,996 ಕೋಟಿ ಬಜೆಟ್ ಅನುದಾನದ ಪೈಕಿ ಇಲ್ಲಿಯವರೆಗೆ 73,440 ಕೋಟಿ (ಶೇ.39ರಷ್ಟು) ಸಾಧನೆಯಾಗಿದೆ. ಕಳೆದ ವರ್ಷ ಶೇ.42.40ರಷ್ಟು ಸಾಧನೆಯಾಗಿತ್ತೆಂದು ಅಂಕಿ ಅಂಶಗಳ ವಿವರ ನೀಡಿದರು.

ಸಣ್ಣ ನೀರಾವರಿ ಶೇ.29, ಹಿಂದುಳಿದ ವರ್ಗಗಳ ಕಲ್ಯಾಣ 26, ಸಮಾಜ ಕಲ್ಯಾಣ 24, ಲೋಕೋಪಯೋಗಿ 24, ಪರಿಶಿಷ್ಟ ವರ್ಗಗಳ ಇಲಾಖೆ 17, ಕಂದಾಯ ಇಲಾಖೆ 15ರಷ್ಟು ಕಳಪೆ ಸಾಧನೆ ಮಾಡಿದೆ.

ವಿಶೇಷ ಯೋಜನಾ ಅಭಿವೃದ್ದಿ ಯೋಜನೆಯಡಿ ಜಲಸಂಪನ್ಮೂಲ ಶೇ.23, ಮೂಲಸೌಕರ್ಯಗಳು 21, ಲೋಕೋಪಯೋಗಿ 18, ಆರೋಗ್ಯ 17, ಸಾರಿಗೆ 17, ಕೃಷಿ 15, ಪ್ರಾಥಮಿಕ 15.12, ಗ್ರಾಮೀಣಾಭಿವೃದ್ದಿ ಶೇ.12ರಷ್ಟು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಶೂನ್ಯ ಸಾಧನೆಯಾಗಿದೆ ಎಂದರು.

ನಗರಾಭಿವೃದ್ದಿ ಶೇ.37, ಸಣ್ಣನೀರಾವರಿ 32, ಕೃಷಿ 30,  ಆರೋಗ್ಯ 29, ಸಾರಿಗೆ 28, ಜಲಸಂಪನ್ಮೂಲ 24, ಸಮಾಜ ಕಲ್ಯಾಣ 24, ಪಶು ಸಂಗೋಪನೆ ಶೇ.19, ವಾಣಿಜ್ಯ ಕೈಗಾರಿಕೆ ಇಲಾಖೆ 0 ಸಾಧನೆಯಾಗಿದೆ ಎಂದು ವಿವರಿಸಿದರು. ಕೇಂದ್ರ ಪುರಸ್ಕೃತ ಯೋಜನೆಯಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶೂನ್ಯ ಸಾಧನೆ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆ ಶೇ.4, ಸಣ್ಣ ಕೈಗಾರಿಕೆ ಇಲಾಖೆ 12, ಕೌಶಲ್ಯಾಭಿವೃದ್ಧಿ 20, ಉನ್ನತ ಶಿಕ್ಷಣ 22, ವೈದ್ಯಕೀಯ 27, ಕೃಷಿ ಇಲಾಖೆ ಶೇ.28 ಬಿಟ್ಟರೆ ಕಡೆಪಕ್ಷ ಈ ಸಕರ್ಾರ ಕೇಂದ್ರ ಸಕರ್ಾರದ  ಅನುದಾನವನ್ನೂ ಸಹ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು  ಆಪಾದಿಸಿದರು. 

ಕಳೆದ ಎಂಟು ತಿಂಗಳಿನಿಂದ ಶಾಸಕರ ನಿಧಿಯ ಎರಡು  ಕೋಟಿ ರೂ. ಅನುದಾನದಲ್ಲಿ ಒಂದೂ ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಸಹಕಾರ ಸಂಘಗಳಿಗೆ 547 ಕೋಟಿ ಬಡ್ಡಿ ಕಟ್ಟಬೇಕು, ಹಾಲಿಗೆ ನೀಡಲಾಗುತ್ತಿದ್ದ ಪ್ರೋ ಧನ 400 ಕೋಟಿ ಬಾಕಿ ಇದೆ.ಗಂಗಾಕಲ್ಯಾಣ ಯೋಜನೆಯಡಿ ಒಂದೇ ಒಂದುಬೋರ್ವೆಲ್ ಕೊರೆಸಿಲ್ಲ. ನಿಮ್ಮ ಸಚಿವರು ಏನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.

ಪಾಪದ ಕೂಸು: 

ನೈಸ್ ಯೋಜನೆ ವಿರುದ್ಧ ಮತ್ತೆ ಹೋರಾಟ ಆರಂಭಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಇದು ನಿಮ್ಮ ಪಾಪದ ಕೂಸೇ ಹೊರತು ಬೇರೆಯವರಿಂದ ಏನಾಗಿದೆ ಎಂಬುದನ್ನು ಚಚರ್ೆ ಮಾಡಿ ಸದನಸಮಿತಿ ನೀಡಿರುವ ವರದಿಯನ್ನು ಅನುಷ್ಠಾನ ಮಾಡಲು ಗೌಡರು ತಮ್ಮ ಮಗನಿಗೆ ಸಲಹೆ ಕೊಡಬಹುದಲ್ಲ ಎಂದು  ಹೇಳಿದರು. ಪ್ರಜಾಪ್ರಭುತ್ವ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಗೌಡರು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆಯೋ  ಅಥವಾ ನಿಮ್ಮ ಮಗನ ನೇತೃತ್ವದ ಸಕರ್ಾರ ಅಪಾಯದಲ್ಲಿದೆಯೋ ಎಂಬುದನ್ನು ಸರಿಯಾಗಿ ಜನರಿಗೆ ಅರ್ಥವಾಗುವಂತೆ ದೇವೇಗೌಡರು ತಿಳಿಸಲಿ ಎಂದು ಒತ್ತಾಯಿಸಿದರು.