ಕೆಎಲ್‌ಇ ವೇಣುಧ್ವನಿ-ಆರ್ಸಿಯು ಪತ್ರಿಕೋದ್ಯಮ ವಿಭಾಗದ ಮಧ್ಯ ಒಡಂಬಡಿಕೆ
ಬೆಳಗಾವಿ 05: ಕೆಎಲ್‌ಇ ವಿವಿಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಧ್ಯ ಶೈಕ್ಷಣಿಕ ಒಡಬಂಡಿಕೆ ಕಾರ್ಯಕ್ರಮ ಮಂಗಳವಾರ ವೇಣುಧ್ವನಿ 90.4 ಎಫ್. ಎಂ. ಸಮುದಾಯ ಬಾನುಲಿ ಕೇಂದ್ರದಲ್ಲಿ ಜರುಗಿತು.
ಕೆಎಲ್‌ಇ ವಿಶ್ವವಿದ್ಯಾಲಯದ ವೇಣುಧ್ವನಿ ಬಾನುಲಿ ಕೇಂದ್ರದ ನಿಲಯ ನಿರ್ವಾಹಕ ಡಾ. ವಿರೇಶಕುಮಾರ ನಂದಗಾಂವ ಮಾತನಾಡಿ ಕೆಎಲ್‌ಇ ವಿವಿ ಅಡಿಯಲ್ಲಿ ಕಾರ್ಯನಿರ್ವಹಿಸುವ ವೇಣುಧ್ವನಿ ಸಮುದಾಯ ಬಾನುಲಿಯು ಸಾಮಾಜಿಕ, ಕಲೆ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ಬಹಳಷ್ಟು ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ಬಿತ್ತರಿಸುವ ಮೂಲಕ ಸ್ಥಳಿಯ ಕಲೆ, ಸಂಸ್ಕೃತಿ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ನಾಟಕ ಉತ್ತರ ಭಾಗದ ದೊಡ್ಡ ವಿವಿ ಎಂದು ಖ್ಯಾತಿ ಪಡೆದಿದೆ. ಅದರಂತೆ ಕೆಎಲ್‌ಇ ವಿವಿಯು ಆರೋಗ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆ ಎಂದು ಹೆಗ್ಗುರುತು ಹೊಂದಿದೆ. ಈ ಎರಡು ವಿವಿಗಳ ಮಧ್ಯ ಪರಸ್ಪರ ಈ ಒಡಂಬಡಿಕೆಯು ಅಡಿಯಲ್ಲಿ ಸಂಪನ್ಮೂಲ ವಿನಿಮಯದ ಮೂಲಕ ಎರಡು ವಿಶ್ವವಿದ್ಯಾಲಯಗಳಿಗೆ ಹೊಸ ಕೀರ್ತಿ ಮತ್ತು ಶೈಕ್ಷಣಿಕ ಚುಟುವಟಿಕೆಗಳಿಗೆ ನವ ಚೈತನ್ಯ ನೀಡಲಿದೆ ಎಂದರು.
ಆರ್ಸಿಯು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕಿ ಡಾ. ಸುಷ್ಮಾ. ಆರ್ ಮಾತನಾಡಿ, ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರವು ಅತ್ಯಂತ ಸದಭಿರುಚಿ ಕಾರ್ಯಕ್ರಮ ಪ್ರಸಾರ ಮಾಡುವುದರ ಮೂಲಕ ಬೆಳಗಾವಿ ನಗರದಲ್ಲಿ ಜನಮನ್ನಣೆ ಪಡೆದಿದೆ. ಟಿ.ವಿ, ಸಿನಿಮಾ ಕೆಲ ಬಾರಿ ಅಬ್ಬರ ಎನ್ನಿಸಬಹುದು ಬಾನುಲಿ ಕಾರ್ಯಕ್ರಮಗಳು ಸದಾ ಮನಸ್ಸಿಗೆ ಮುದ ನೀಡುತ್ತವೆ ಎಂದರು.
ವೇಣುಧ್ವನಿ 90.4 ತರಂಗಾಂತರ ಸಮುದಾಯ ಬಾನುಲಿಯೊಂದಿಗಿನ ಪತ್ರಿಕೋದ್ಯಮ ವಿಭಾಗದ ನಂಟು ಕಳೆದ 7-8 ವರ್ಷಗಳಿಂದ ಸಾಗಿ ಬಂದಿದೆ. ಈ ಶೈಕ್ಷಣಿಕ ಒಪ್ಪಂದ ಎರಡು ವರ್ಷಗಳ ಹಿಂದೆ ಮಾಡಿಕೊಳ್ಳಲಾಗಿತ್ತು. ಸದ್ಯ ಆ ಒಡಂಬಡಿಕೆಯನ್ನು ನವೀಕರಿಸಲಾಗುತ್ತಿದೆ. ಇದರಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ದೊಡ್ಡ ಅವಕಾಶ ದೊರೆಯುತ್ತದೆ ಎಂದರು.
ಕೆಎಲ್‌ಇ ವೇಣುಧ್ವನಿ ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ, ಕಾರ್ಯಕ್ರಮ ನಿರ್ವಾಹಕಿ ಮನೀಷಾ ಸನ್ನಾಯಿಕ, ಪತ್ರಿಕೋದ್ಯಮ ವಿಭಾಗದ ಬೋಧಕ ಸಿಬ್ಬಂದಿ ಆನಂದ ತುಳಸಿಕಟ್ಟಿ ಮತ್ತು ಅರುಣ ಹೊಸಮಠ ಸೇರಿದಂತೆ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮತ್ತು ಬಾನುಲಿ ಕೇಂದ್ರದ ಇತರೆ ಸಿಬ್ಬಂದಿ ಹಾಜರಿದ್ದರು. ಪತ್ರಿಕೋದ್ಯಮ ವಿಭಾಗದ ಬೋಧಕ ಸಹಾಯಕಿ ವಿದ್ಯಾಶ್ರೀ ಹಾಲಕೇರಿಮಠ ನಿರೂಪಿಸಿದರು.