ಲೋಕದರ್ಶನ ವರದಿ
ಕೊಪ್ಪಳ 04: ಪತ್ರಕರ್ತನಿಗೆ ಯಾವುದೇ ಜಾತಿ, ಧರ್ಮವಿಲ್ಲ. ತನ್ನ ವೃತ್ತಿಯಲ್ಲಿ ಒಬ್ಬರ ಓಲೈಕೆಗಾಗಿ ಸುದ್ದಿಯ ಸತ್ಯವನ್ನು ಮರೆಮಾಚಬಾರದು. ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಅದನ್ನೇ ನಾವು ಹೇಳಬೇಕು ಎಂದು ಹಿರಿಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪೂರ ಅವರು ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಕೊಪ್ಪಳ ಮೀಡಿಯಾ ಕ್ಲಬ್ನಿಂದ ನಡೆದ ಪತ್ರಿಕಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ನಮ್ಮ ಸಂಸ್ಥೆಗಳಿಗೆ ಸುದ್ದಿ ಕೊಡುವ ಆತುರದಲ್ಲಿ ಏನೇನೋ ಕೊಡುತ್ತಿದ್ದೇವೆ. ಇದೊಂದು ಆತಂಕಕಾರಿ ವಿಷಯ ನಾವು ಮಾಡುವ ಸುದ್ದಿ, ವರದಿಗಾರಿಕೆಯನ್ನೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ರಾಜ್ಯ ಸೇರಿ ದೇಶದಲ್ಲಿ ಕೆಲವೇ ಕೆಲವು ಪತ್ರಕರ್ತರಿಂದಾಗಿ ಇಡೀ ಪತ್ರಕರ್ತ ಸಮೂಹ ಕೆಟ್ಟ ಹೆಸರು ಪಡೆದುಕೊಳ್ಳುತ್ತಿದೆ. ಇದೊಂದು ಬೇಸರದ ಸಂಗತಿ. ಪ್ರಸ್ತುತ ದಿನದಲ್ಲಿ ನಾವು ನಮ್ಮ ಸಂಸ್ಥೆಗಳಿಗೆ ಸುದ್ದಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ನೈಜ ವರದಿಗಾರಿಕೆ ಕಡಿಮೆಯಾಗುತ್ತಿದೆ ಎಂದರು.
ನಾವು ಮಾಡುವ ವರದಿಗಾರಿಕೆಯನ್ನು ಅತ್ಯಂತ ಎಚ್ಚರಿಕೆ ಮಾಡಬೇಕು. ನಮ್ಮ ಸಣ್ಣ ತಪ್ಪಿನಿಂದಾಗಿ ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ಸುದ್ದಿ ಕೊಡುವ ಬರದಲ್ಲಿ ಆತುರ ಮಾಡುವುದು ಬೇಡ ಎಲ್ಲವನ್ನೂ ಪರಿಶೀಲನೆ ಮಾಡಿಕೊಂಡೇ ಸುದ್ದಿ ಕೊಡಬೇಕು. ಮಾಧ್ಯಮ ಹಾಗೂ ಪತ್ರಕರ್ತರ ಮೇಲೆ ಸಮಾಜ ತುಂಬ ನಂಬಿಕೆಯನ್ನಿಟ್ಟಿದೆ. ನಾವೆಲ್ಲರೂ ಸೇರಿ ಸಮಾಜ ಬದಲಾವಣೆಗೆ ಶ್ರಮಿಸೋಣ. ನಮ್ಮ ಸುದ್ದಿಯ ಮಹತ್ವವನ್ನು ನಾವು ತಿಳಿಯಬೇಕಿದೆ. ಜೊತೆಗೆ ಅದರ ವಿಮಶರ್ೆ ಮಾಡುವ ಜೊತೆಗೆ ನಮ್ಮ ಸುದ್ದಿಗಳ ಬಗ್ಗೆ ಆತ್ಮವಿಶ್ವಾಸವಿರಲಿ ಎಂದರು.
ಧಾರವಾಡದ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ್ ಮಾತನಾಡಿ, ಮಾಧ್ಯಮ ಕ್ಷೇತ್ರ ಪ್ರಸ್ತುತ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಿಕ್ಕಿಕೊಳ್ಳುತ್ತಿದೆ. ಇದು ದೊಡ್ಡ ಅಪಾಯವನ್ನು ತಂದೊಡ್ಡುತ್ತಿದೆ. ಮೊದಲು ಪತ್ರಿಕಾ ರಂಗವಿತ್ತು. ಈಗ ಉದ್ಯಮವಾಗಿ ಬೆಳೆದು ನಿಂತಿದೆ. ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರಿಗೆ ಆಂತರಿಕ ಸ್ವಾತಂತ್ರವೇ ಇಲ್ಲದಂತ ಪರಿಸ್ಥಿತಿ ನಿಮರ್ಾಣವಾಗುತ್ತಿದೆ. ಅವರಿಗೆ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಂತಾಗುತ್ತಿದೆ ಎಂದರು.
ಇಂದು ಸೋಸಿಯಲ್ ಮೀಡಿಯಾದಲ್ಲಿ ಮುಕ್ತ ಸ್ವಾತಂತ್ರ್ಯ ಇದೆ. ಆದರೆ ಅದಕ್ಕೆ ಗಟ್ಟಿತನವಿಲ್ಲ. ಪತ್ರಿಕಾ ಕ್ಷೇತ್ರದಲ್ಲಿ ಸ್ವಾತಂತ್ರ್ಯವಿಲ್ಲ. ಪತ್ರಿಕೋಧ್ಯಮವನ್ನು ಸೋಸಿಯಲ್ ಮೀಡಿಯಾ ಮುನ್ನಡೆಸುವ ಸ್ಥಿತಿ ಎದುರಾಗುತ್ತಿದೆ. ಸೋಸಿಯಲ್ ಮೀಡಿಯಾದ ಸುದ್ದಿಯನ್ನು ಪರೀಕ್ಷೆ ಮಾಡಬೇಕು. ಮಾಧ್ಯಮವು ರಾಜಕಾರಣಿಗಳ ಒಡನಾಟದ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು. ಪತ್ರಕರ್ತರಿಗೆ ಸಂವೇಧನೆ ಸೂಕ್ಷ್ಮತೆ ಇದ್ದರೆ ಸಮಾಜ ಸುಧಾರಣೆ ಸಾಧ್ಯ ಎಂದರು.
ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ, ಇತ್ತೀಚೆಗನ ದಿನದಲ್ಲಿ ಪತ್ರಕರ್ತರೂ ಸಹ ಪ್ರಚಾರಕ್ಕೆ ಆಸೆ ಪಡುತ್ತಿದ್ದಾರೆ. ಅವರು ಸಮಾಜ ಸುಧಾರಣೆಗೆ ಶ್ರಮಿಸಬೇಕಿದೆ. ನಿಮ್ಮ ಕೈ ಬರವಣೆಯ ಚಮತ್ಕಾರದಿಂದ ಸಮಾಜ ಸುಧಾರಣೆ ಸಾಧ್ಯವಿದೆ.
ಪತ್ರಿಕಾ ರಂಗಕ್ಕೆ ಹೆಚ್ಚಿನ ಮಹತ್ವವಿದೆ. ನೀವು ಜನ ಸಾಮಾನ್ಯರ ನೋವು ಆಲಿಸಬೇಕಿದೆ. ಬಡವರಿಗೆ ನ್ಯಾಯ ಕೊಡಿಸಬೇಕಿದೆ. ಶಾಸಕಾಂಗಕ್ಕೆ, ಆಡಳಿತಕ್ಕೆ ಚುರುಕು ಮುಟ್ಟಿಸುವ, ನೊಂದು ಬೆಂದವರಿಗೆ ಬೆಳಕಾಗಬೇಕಿದೆ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳ ತುಂಬ ಶ್ರಮಿಸಿವೆ. ಈ ಹಿಂದೆ ಪತ್ರಿಕೆಗಳನ್ನು ನಡೆಸುವುದು ತುಂಬ ಕಷ್ಟದ ಪರಿಸ್ಥಿತಿಯಿತ್ತು. ಆದರೆ ಈಗ ಸುಲಭವಾಗಿದೆ. ಹಾಗೆಂದ ಮಾತ್ರಕ್ಕೆ ಯಾರ ಮುಂದೆಯೂ ಕೈ ಚಾಚಿ ನಿಲ್ಲುವ ಕೆಲಸಕ್ಕೆ ಕೈ ಹಾಕಬೇಡಿ. ಎಲ್ಲರನ್ನು ಜಾಗೃತಗೊಳಿಸುವ ಕಾರ್ಯ ನಿಮ್ಮ ಕೈಯಲ್ಲಿದೆ. ಸುದ್ದಿ ಮಾಡುವ ವೇಳೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬುದು ನಮ್ಮಲ್ಲಿ ಇರಲಿ ಎಂದರು.
ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸಂತೋಷ ದೇಶಪಾಂಡೆ ಮಾತನಾಡಿ, ಪತ್ರಕರ್ತರ ಭದ್ರತೆಗೆ ಶಾಸಕರು ಸಕರ್ಾರದ ಮಟ್ಟದಲ್ಲಿ ಪ್ರಸ್ತಾಪ ಮಾಡಲಿ. ನಮ್ಮ ಭದ್ರತೆಗೆ ಸರ್ಕಾರವೂ ಹೆಚ್ಚಿನ ಗಮನ ನೀಡಲಿ ಎಂದು ಒತ್ತಾಯಿಸಿದರು.
ಮೀಡಿಯಾ ಕ್ಲಬ್ ಗೌರವಾಧ್ಯಕ್ಷ ಸೋಮರಡ್ಡಿ ಅಳವಂಡಿ ಅವರು ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಟಿವಿ9 ವಿಡಿಯೋ ಜರ್ನಲಿಸ್ಟ್ ಶಿವಕುಮಾರ ಹುಲಿಪುರ ಮಾತನಾಡಿದರು. ಸಮಾರಂಭದಲ್ಲಿ ಹಿರಿಯ ಛಾಯಾಗ್ರಾಹಕ ಪ್ರಕಾಶ ಕಂದಕೂರು, ಶ್ರಿಪಾದ ಅಯಾಚಿತ್ ಸೇರಿ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.