ಹಳಿಯಾಳ30: ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಮಾರ್ಗದರ್ಶನ ನೀಡಬೇಕು. ಮಕ್ಕಳ ರಕ್ಷಣೆಯು ಎಲ್ಲರ ಹೊಣೆಯಾಗಿದ್ದು ಪಾಲಕರು ಹೆಚ್ಚಿನ ಮುತುವಜರ್ಿ ವಹಿಸಿ ಮಕ್ಕಳ ಲಾಲನೆ ಪಾಲನೆ ಜೊತೆಗೆ ಅವರ ಶೈಕ್ಷಣಿಕ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದು ವೃತ್ತ ಪೊಲೀಸ್ ನಿರೀಕ್ಷಕ ಬಿ.ಎಸ್. ಲೋಕಾಪೂರ ತಿಳಿಸಿದರು.
ಹಳಿಯಾಳ ಪಟ್ಟಣದ ಸರದಾರ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯು ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಬರುವ ದೂರುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದರ ಮೂಲಕ ಅವುಗಳನ್ನು ಪರಿಹರಿಸಲು ಮುಂದಾಗಿದೆ. ಅಲ್ಲದೇ ವಿಶೇಷ ತಂಡಗಳನ್ನು ರಚಿಸಿ ಅವುಗಳ ತನಿಖೆಗೆ ಮುಂದಾಗಿದ್ದು ಮಕ್ಕಳು ದೇಶದ ಸಂಪತ್ತಾಗಿದ್ದು ಅದರ ರಕ್ಷಣೆ ಎಲ್ಲರೂ ಮಾಡಬೇಕಾಗಿದೆ ಎಂದರು.
ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ ಮಾತನಾಡಿ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಅವರಲ್ಲಿಯ ಪ್ರತಿಭೆಗಳನ್ನು ಹೊರಗೆ ತರಲು ಮತ್ತು ಮಾರ್ಗದರ್ಶನ ಮಾಡಲು ಅನುಕೂಲವಾಗುತ್ತದೆ. ಮಕ್ಕಳು ಹಾಗೂ ಮಹಿಳೆಯರು ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯಲು ಮುಂದಾದರೆ ದೇಶದ ಅಭಿವೃದ್ದಿಯು ಉನ್ನತ ಮಟ್ಟದಲ್ಲಿ ಆಗಲು ಸಾಧ್ಯವಾಗುತ್ತದೆ. ಮಕ್ಕಳ ಶ್ರೇಯೋಭಿವೃದ್ದಿಯು ಸಮಾಜದ ಅಂಗವಾಗಿದ್ದು ಅದನ್ನು ಎಲ್ಲರು ಮಾಡಬೇಕಾಗಿದೆ ಎಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಅಂಬಿಕಾ ಕಟಕೆ ಮಾತನಾಡಿ, ಬೇಸಿಗೆಯ ಕಾಲದಲ್ಲಿ ಮಕ್ಕಳು ಮೊಬೈಲ್ದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಭಾಗವಹಿಸಿದರೇ ಅವರಿಗೆ ಉಚಿತವಾಗಿ ಡಾನ್ಸ್, ಸಂಗೀತ, ಚಿತ್ರಕಲೆ, ಕರಾಟೆ, ಜೇಡಿ ಮಣ್ಣಿನ ಕಲೆ, ಪೇಪರ್ ಕ್ರಾಫ್ಟ್, ಸಮೂಹ ನೃತ್ಯ ಸೇರಿದಂತೆ ಇನ್ನಿತರ ಕಲೆಗಳನ್ನು ಸಹ ಕಲಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಅವರು ತಮ್ಮ ಶೈಕ್ಷಣಿಕ ಅಭಿವೃದ್ದಿ ಜೊತೆಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲ್ಕರ ಮಾತನಾಡಿ ಮಕ್ಕಳಿಗೆ ತಾಯಂದಿರು ಉತ್ತಮ ಗುಣಗಳನ್ನು ಬೆಳೆಸಲು ಸಹಾಯ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಮಕ್ಕಳು ಸಂಸ್ಕಾರವನ್ನು ಕಲಿಯಲು ಸಾಧ್ಯವಾಗುತ್ತದೆ.
ಮಕ್ಕಳಿಗೆ ಕಲಿಕೆಯು ನಿರಂತರವಾಗಿದ್ದು ಪಾಲಕರು ಆದಷ್ಟು ಮೊಬೈಲ್ದಿಂದ ದೂರ ಉಳಿಯುವಂತಹ ಹವ್ಯಾಸಗಳನ್ನು ಕಲಿಸಬೇಕಾಗಿದ್ದು ಇದರಿಂದ ಉತ್ತಮ ಸಮಾಜದ ನಿಮರ್ಾಣ ಸಾಧ್ಯವೆಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ 10 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ವಿವಿಧ ಕಲೆಗಳನ್ನು ಕಲಿತ ಮಕ್ಕಳು ಡಾನ್ಸ್, ಚಿತ್ರಕಲೆ, ಜೇಡಿ ಮಣ್ಣಿನ ಕಲಾಕೃತಿಗಳು ಸೇರಿದಂತೆ ಇನ್ನಿತರ ಕಲೆಗಳ ಪ್ರದರ್ಶನ ಮಾಡಿದರು.
ವಕೀಲ ಮಂಜುನಾಥ ಮಾದರ, ಮಾರುತಿ ಖಾನಾಪೂರಕರ, ಕೃಷ್ಣಾ ಪುರೋಹಿತ, ನಾಗಲಿಂಗ ಚಲವಾದಿ, ಗೋವಿಂದ ಗಡಾದ, ವಿಷ್ಣು, ಮೇಲ್ವಿಚಾರಕಿಯರಾದ ಸುವರ್ಣ ಗುರವ, ಅನುಸೂಯಾ ರೇಡೆಕರ, ರಾಜೇಶ್ವರಿ ಗವಿಮಠ, ಚೇತನ ಮತ್ತು ಜಬ್ಬಾರ ಮೊದಲಾದವರಿದ್ದರು.