ಚಿಂಚಲಿ ಮಾಯಕ್ಕದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ಕೈಜೋಡಿಸಿ: ಶಾಸಕ ಡಿ.ಎಮ್.ಐಹೊಳೆ
ರಾಯಬಾಗ,18: ಉತ್ತರ ಕರ್ನಾಟಕದ ಶಕ್ತಿ ದೇವತೆ ಚಿಂಚಲಿ ಮಾಯಕ್ಕದೇವಿ ಜಾತ್ರೆಯನ್ನು ಯಶಸ್ವಿಯಾಗಿ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ತಾಲೂಕಿನ ಚಿಂಚಲಿ ಪಟ್ಟಣದ ಗೀತಾ ಮೋಹನ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಾಯಕ್ಕ ದೇವಿ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆ, ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರಿಗೆ ಕುಡಿಯುವ ನೀರು, ಶೌಚಾಲಯ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಜಾತ್ರೆ ಕಮಿಟಿಯರು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು.
ನದಿ ದಂಡೆಯಲ್ಲಿರುವ ರೈತರ ಮೋಟರ್, ಕೇಬಲ್ ಗಳು ಕಳ್ಳತನ ಆಗುತ್ತಿದ್ದರೂ ಕುಡಚಿ ಪೊಲೀಸರು ಯಾವುದೇ ಕ್ರಮ ಕೈಕೊಂಡಿರುವದಿಲ್ಲ ಎಂದು ತರಾಟೆ ತೆಗೆದುಕೊಂಡ ಅವರು, ಸ್ವತಃ ನನ್ನ ಜಮೀನಿನಲ್ಲಿ ಕೂಡ ಕಳ್ಳತನ ಆಗಿರುವುದರ ಬಗ್ಗೆ ತಿಳಿಸಿ, ಪೊಲೀಸರ ವೈಫಲ್ಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.ಹಿಡಕಲ್ ಡ್ಯಾಂ ದಿಂದ ಜಾತ್ರೆ ಸಲುವಾಗಿ ನೀರು ಬಿಡುಗಡೆಗೊಳಿಸಲಾಗುವುದು, ನೀರಾವರಿ ಇಲಾಖೆಯವರು ಪೊಲೀಸರ ಸಹಾಯದೊಂದಿಗೆ ಚಿಂಚಲಿವರೆಗೆ ನೀರು ತಲುಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಮಾತನಾಡಿ, ಪಟ್ಟಣ ಪಂಚಾಯತಿಯವರು ಜಾತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಹೆಚ್ಚಿನ ನೀರಿನ ಟ್ಯಾಂಕರ್ ಗಳನ್ನು ಅವಶ್ಯವಿದ್ದರೆ ಟ್ಯಾಂಕರ್ ಗಳನ್ನು ಒದಗಿಸಲಾಗುವುದು, ಜಾತ್ರೆಗೆ ಬರುವ ಭಕ್ತರಿಗೆ ಮೊಬೈಲ ಶೌಚಾಲಯ ನಿರ್ಮಾಣ ಮಾಡಬೇಕೆಂದರು.
ಡಿ.ವಾಯ್.ಎಸ್.ಪಿ ಪ್ರಶಾಂತ ಮುನ್ನೋಳ್ಳಿ ಮಾತನಾಡಿ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡುವುದಾಗಿ ತಿಳಿಸಿದರು. ಪ.ಪಂಚಾಯತ ಯವರು ಜಾತ್ರೆಗೆ ಬರುವ ಅಂಗಡಿಯರು ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಬೇಕು. ಜೊತೆಗೆ ಪಂಚಾಯತಯವರು ಪಟ್ಟಣದ ಎಲ್ಲ ಕಡೆಗಳಲ್ಲಿ ಅಳವಡಿಸಬೇಕೆಂದರು. ಜಾತ್ರೆಯಲ್ಲಿ ಅಂಗಡಿಕಾರರು ಕಳಪೆ ಬಂಡಾರ ಮಾರಾಟ ಮಾಡುವುದನ್ನು ಕಟ್ಟುನಿಟ್ಟಿನಿಂದ ತಡೆಯಬೇಕು, 3 ದಿನ ಮದ್ಯ ಮಾರಾಟ ಬಂದ ಮಾಡಬೇಕು, ಪಶು ವೈದ್ಯರು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ಆರೋಗ್ಯ ಇಲಾಖೆಯವರು ಭಕ್ತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ನೇಮಿಸಬೇಕೆಂದು ಸಭೆಯಲ್ಲಿ ನಾಗರಿಕರು ಒತ್ತಾಯಿಸಿದರು. ಕಳಪೆ ಬಂಡಾರ ಮಾರಾಟ ಮಾಡುವ ಅಂಗಡಿಕಾರರ ಅಂಗಡಿ ಸಿಜ್ ಮಾಡುವಂತೆ ತಹಶೀಲ್ದಾರ ಅವರು ಆರೋಗ್ಯ ಇಲಾಖೆಯವರಿಗೆ ಸೂಚಿಸಿದರು.
ಸಭೆಯಲ್ಲಿ ದೇವಸ್ಥಾನ ಟ್ರಸ್ಟ ಅಧ್ಯಕ್ಷ ಜಿತೇಂದ್ರ ಜಾಧವ, ತಹಶೀಲ್ದಾರ ಸುರೇಶ ಮುಂಜೆ, ಸಿಪಿಐ ಬಿ.ಎಸ್. ಮಂಟೂರ, ಪ.ಪಂ.ಅಧ್ಯಕ್ಷೆ ಕವಿತಾ ಯಡ್ರಾಂವಿ, ಮುಖ್ಯಾಧಿಕಾರಿ ವೆಂಕಟೇಶ ಬಳ್ಳಾರಿ, ತಾಲೂಕಾ ಅಧಿಕಾರಿಗಳಾದ ವಿನೋದ ಮಾವರಕರ, ಆರಿ್ಬ. ಮನವಡ್ಡರ, ಕಿರಣ ಚಂದರಗಿ, ಎಮ್.ಬಿ.ಪಾಟೀಲ, ಉಮೇಶ ಪ್ರಧಾನಿ, ಶಂಕರಗೌಡ ಪಾಟೀಲ, ಭಾರತಿ ಕಾಂಬಳೆ, ಎಚ್.ಎಲ್.ಪೂಜಾರಿ ಸೇರಿ ಅನೇಕರು ಪಾಲ್ಗೊಂಡಿದ್ದರು.