ಮುನಿರಾಬಾದ ಡ್ಯಾಂ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಿ: ರಾಹುಲ್ ರತ್ನಂ ಪಾಂಡೇಯ
ಕೊಪ್ಪಳ 18: ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಡ್ಯಾಂ ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ಕುರಿತಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಮಂಗಳವಾರ ಮುನಿರಾಬಾದ್‌ಗೆ ಭೇಟಿ ನೀಡಿ, ವಿವಿಧ ಸ್ಥಳಗಳನ್ನು ಪರೀಶೀಲಿಸಿ ಅಲ್ಲಿನ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ಇದೇ ವೇಳೆ ಜಿ.ಪಂ ಸಿಇಓ ಅವರು ಮಾತನಾಡಿ, ಮುನಿರಾಬಾದ ಡ್ಯಾಂ ಗ್ರಾಮ ಪಂಚಾಯತಿ ಸಂಪೂರ್ಣ ಅಭಿವೃದ್ಧಿಪಡಿಸಲು ಕೆಲವು ತಾಂತ್ರಿಕ ಅಡಚಣೆಗಳಿದ್ದು, ಅವುಗಳನ್ನು ಪರಿಹರಿಸಲು ಮೇಲಾಧಿಕಾರಿಗಳಿಗೆ ಸಂಪೂರ್ಣ ವರದಿ ಸಿದ್ಧಪಡಿಸಿ ಸಲ್ಲಿಸಬೇಕಿದೆ. ಇದಕ್ಕಾಗಿ ಅಗತ್ಯ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು. ಒಟ್ಟಾರೆ, ಮುನಿರಾಬಾದ್ ಡ್ಯಾಂ ಸಮಗ್ರ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯವರು ಕೈ ಜೋಡಿಸಬೇಕು ಎಂದು ಹೇಳಿದರು. 1993ರಲ್ಲಿ ಮುನಿರಾಬಾದ ಡ್ಯಾಂ ಹೊಸ ಗ್ರಾಮ ಪಂಚಾಯತ ಆಗಿ ರಚನೆಯಾಗಿದ್ದು, ಕಂದಾಯ ದಾಖಲೆಗಳ ಪ್ರಕಾರ ಮುನಿರಬಾದ ಯೋಜನಾ ಪ್ರದೇಶ ವೆಂದು ನಮೂದಾಗಿರುತ್ತದೆಂದು ಆಡಳಿತ ಮಂಡಳಿ ವಿವರಿಸಿದರು. ಗ್ರಾಮ ಪಂಚಾಯತ ಮುಂದುಗಡೆ 280 ಪುಟ್ ಜಾಗ ಲಭ್ಯವಿದ್ದು, ವಾಣಿಜ್ಯ ಮಳಿಗೆಗಳನ್ನು ಜಿಲ್ಲಾ ಮತ್ತು ತಾಲೂಕ ಪಂಚಾಯತಿ ಅನುದಾನದಲ್ಲಿ ನಿರ್ಮಿಸಿಕೊಡುವಂತೆ ಸಿಇಒರವರಿಗೆ ಮನವಿ ಮಾಡಿದರು. ಇದರಿಂದ ಗ್ರಾಮ ಪಂಚಾಯತಿಗೆ ಆದಾಯ ಸೃಜನೆಯಾಗುತ್ತದೆ ಎಂದರು. ಗ್ರಾಮದಲ್ಲಿ ಮಹಿಳಾ ಸಂಜಿವಿನಿ ಸಂಘದ ಮಹಿಳೆಯರಿಂದ ಹೋಂ ಸ್ಟೇಗಳನ್ನು ನಿರ್ಮಿಸಲು ಜಾಗೆ ಇದ್ದವರು ಕೂಡಲೇ ಮಾಹಿತಿಯನ್ನು ನೀಡುವಂತೆ ಸಿಇಓ ಅವರು ಹೇಳಿದರು. ಗ್ರಾಮೀಣ ಸಂತೆಕಟ್ಟೆ ನಿರ್ಮಾಣ ಸ್ಥಳ ಪರೀಶೀಲನೆ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆ ಕಟ್ಟೆ ನಿರ್ಮಿಸಲು ಈಗಾಗಲೇ ಹಳೆ ಪೋಲಿಸ್ ಠಾಣೆಯ ಜಾಗೆಯಲ್ಲಿ ಗ್ರಾಮೀಣ ಸಂತೆ ಕಟ್ಟೆ ನಿರ್ಮಿಸಲು ಸಿಇಓ ಅವರು ಸ್ಥಳ ವೀಕ್ಷಣೆ ಮಾಡಿದರು. ಇದಲ್ಲದೇ ವೀಕಪಂಪಾವನದಲ್ಲಿ ಅಣೆಕಟ್ಟು ನಿರ್ಮಿಸಿದ ಕುರಿತು ವಿಡಿಯೋ ಪ್ರದರ್ಶನ ವ್ಯವಸ್ಥೆ, ವಿಜ್ಞಾನ ಉದ್ಯಾನವನ, ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಪರೀಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ತರಬೇತಿಯಲ್ಲಿ ಭಾಗಿ: ಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕೆ ಇಲಾಖೆಯಿಂದ ಏರಿ್ಡಸಿದ್ದ, ತೋಟಗಾರಿಕೆಯ ಕುರಿತ ತರಬೇತಿಯಲ್ಲಿ ಭಾಗವಹಿಸಿದ ಸಿಇಓ ಅವರು, ತೋಟಗಾರಿಕೆಯಲ್ಲಿ ಕೂಡಾ ನಮ್ಮ ಜೀವನ ರೂಪಿಸಿಕೊಳ್ಳುವಷ್ಟು ಭವಿಷ್ಯವಿದ್ದು, ಓದಿನ ಕಡೆಗೆ ಗಮನಹರಿಸುವದರ ಜೊತೆಗೆ ತೋಟಗಾರಿಕೆ ಮಾಡಿಕೊಳ್ಳುವ ಕುರಿತು ಆಸಕ್ತಿ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕ ಶೌಚಾಲಯ ಕಡ್ಡಾಯವಾಗಿ ಬಳಕೆ ಮಾಡುವದು ಮತ್ತು ಕುಟುಂಬದ ಸದಸ್ಯರಿಗೆ ಮನವೋಲಿಸಬೇಕೆಂದು ತಿಳಿಸಿದರು. ಪಂಪಾವನಕ್ಕೆ ಭೇಟಿ: ಸಿಇಓ ಅವರು ಪಂಪಾವನಕ್ಕೆ ಭೇಟಿ ನೀಡಿ, ಅಲ್ಲಿ ಅಗತ್ಯ ಇರುವ ಬೋಟಿಂಗ್ ಹಾಗೂ ವಿಜ್ಞಾನ ಉದ್ಯಾನವನ ನಿರ್ಮಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮಿನು ಮರಿ ಕೊಳ ವೀಕ್ಷಣೆ: ಮೀನುಗಾರಿಕೆ ಇಲಾಖೆಯಿಂದ ನಿರ್ಮಿಸಲಾದ ಮಿನು ಮರಿ ಕೊಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಭೇಟಿ ನೀಡಿ, ವೀಕ್ಷಣೆ ಮಾಡಿದರು. ಬಳಿಕ ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುತ್ತಾ, ಇಲಾಖೆಯಿಂದ ಇನ್ನುಷ್ಟು ಅನುದಾನ ಬಿಡುಗಡೆಗಾಗಿ ಕೂಡಲೇ ಮೇಲಾಧಿಕಾರಿಗಳಿಗೆ ಪತ್ರ ವ್ಯವಹಾರ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಾಲೂಕ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಲಚಂದ್ರನ್, ಮುನಿರಾಬಾದ್ ಡ್ಯಾಂ ಗ್ರಾಮ ಪಂಚಾಯತ ಅಧ್ಯಕ್ಷ ಆಯೂಬ್ ಖಾನ್, ಉಪಾಧ್ಯಕ್ಷೆ ಸೌಭಾಗ್ಯ ನಾಗರಾಜ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹೇಶ್ ಸಜ್ಜನ, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರು, ಸಂಜಿವಿನಿ ಯೋಜನೆ ಮತ್ತು ನರೇಗಾ ಯೋಜನೆಯ ಸಂಯೋಜಕರುಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.