ಜಲಜೀವನ್ ಮಿಷನ್ ಯೋಜನೆ ನೀರು ಸರಬರಾಜು: ದುರ್ಯೋಧನ
ಚಿಕ್ಕೋಡಿ 27: ರಾಯಬಾಗ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ 11 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಬಾರದು. ಜಲಜೀವನ್ ಮಿಷನ್ ಯೋಜನೆ ಮೂಲಕ ಜನರಿಗೆ ನಿರಂತರ ನೀರು ಸರಬರಾಜು ಮಾಡಬೇಕು. ಮಂಜೂರಾದ ಕಾಮಗಾರಿ ಆರಂಭ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಸೂಚನೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ 11 ಗ್ರಾಪಂ ಅಭಿವೃದ್ಧಿ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ಐಹೊಳೆ ಅವರು ಪ್ರತಿ ವಿಭಾಗವನ್ನು ಪರೀಶೀಲಿಸಿ, ಸಂಬಂಧಿಸಿದ 11 ಗ್ರಾಮಗಳ ಪಿಡಿಒಗಳಿಂದ ಸ್ಥಳೀಯ ಮಾಹಿತಿ ಪಡೆದು ಅಭಿವೃದ್ಧಿ ಕಾಮಗಾರಿಗಳನ್ನು ದೃಢಪಡಿಸಿದರು. ರಾಯಬಾಗ ಕ್ಷೇತ್ರಕ್ಕೆ ಒಳಪಡುವ ಈ ಗ್ರಾಮಗಳಲ್ಲಿ ಸರ್ಕಾರದ ಯೋಜನೆಗಳು ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬ ಆಯವ್ಯಯವನ್ನು ಪ್ರತಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಭೆಗೆ ಕೆಲ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದರೆ, ಕೆಲ ಇಲಾಖೆಗಳ ಅಧಿಕಾರಿಗಳು ಕಿರಿಯ ಅಧಿಕಾರಿಗಳನ್ನು ಕಳುಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನೋಟಿಸ್ ಕಳುಹಿಸುವಂತೆ ಶಾಸಕರು ಸೂಚಿಸಿದರು.
ಕೃಷಿ, ಪಂಚಾಯತ್ ರಾಜ್, ಕಂದಾಯ, ಕೃಷಿ, ತೋಟಗಾರಿಕೆ, ಆರೋಗ್ಯ, ಸಮಾಜ ಕಲ್ಯಾಣ, ಸಂಪನ್ಮೂಲ, ಶಿಕ್ಷಣ, ಅರಣ್ಯ, ಭೂ ನಿಗಮ, ಪಶುಸಂಗೋಪನೆ, ಸಿಡಿಪಿಒ, ಹೆಸ್ಕಾಂ, ಸಾರಿಗೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಬಂಬಲವಾಡ, ಬೆಳಕೂಡ, ಮಂಗನೂರು, ಹತ್ತರವಾಟ, ಜಾಗನೂರ, ವಿಜಯನಗರ, ತೋರನಹಳ್ಳಿ, ಜೈನಾಪುರ, ಕಾರಗಾಂವ, ಕರೋಶಿ, ಮುಗಳಿ, ನಾಗರಮುನ್ನೋಳಿ, ಉಮರಾಣಿ, ಇಟನಾಳ, ಮಜಲಟ್ಟಿ ವಿವಿಧ ಕಾಮಗಾರಿಗಳ ಮಾಹಿತಿ ಪಡೆಯಲಾಯಿತು.
ಸಭೆಯಲ್ಲಿ ತಹಶೀಲ್ದಾರ ಸಿ.ಎಸ್.ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಾದ್ರೊಳೆ, ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಕುಮಾರ ಭಾಗಾಯಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ. ಉಪ್ಪಾರ್, ಜಲಜೀವನ ಇಲಾಖೆಯ ಪಾಂಡುರಂಗರಾವ್, ಪಂಚಾಯತ್ ರಾಜ್ ಇಲಾಖೆಯ ನಾಯಿಕವಾಡಿ, ತಾಲೂಕಾ ಪಂಚಾಯತ್ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾವಿ ಮುಂತಾದವರು ಇದ್ದರು. ತಾಪಂ ಕಚೇರಿಯಲ್ಲಿ ಪ್ರಗತಿ ಪರೀಶೀಲನಾ ಸಭೆ ನಡೆಸಿದ ಶಾಸಕ ದುರ್ಯೋಧನ ಐಹೊಳೆ.