ಭಕ್ತಸಾಗರದ ಮಧ್ಯ ಜರುಗಿದ ಶಿರಹಟ್ಟಿ ಜಗದ್ಗುರು ಫಕೀರೇಶ್ವರ ರಥೋತ್ಸವ

ಲೋಕದರ್ಶನ ವರದಿ

ಶಿರಹಟ್ಟಿ 18: ಹಿಂದೂ ಮುಸ್ಲೀಂ ಭಾವೈಕ್ಯತೆಗೆ ಹೆಸರು ವಾಸಿಯಾದ ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರೇಶ್ವರ ಮಹಾಸ್ವಾಮಿಗಳ ರಥೋತ್ಸವ ಶನಿವಾರ ಸಂಜೆ ಅಪಾರ ಭಕ್ತರ ಸಮೂಹದ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಇದಕ್ಕೂ ಮೊದಲು ಪೂಜ್ಯರು 9 ದಿನಗಳ ಕಾಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಭಕ್ತರಿಂದ ದವಸ ದಾನ್ಯ ಹಾಗೂ ದೇಣಿಗೆಗಳನ್ನು ಸಂಗ್ರಹಿಸಿ ಭಕ್ತರಿಗೆಲ್ಲರಿಗೂ ಆಶೀರ್ವದಿಸುತ್ತಾ ಆಗಿ ಹುಣ್ಣಿಮೆಯ (ಮೇ18ರಂದು) ಮರಳಿ ಪುರ ಪ್ರವೇಶ ಮಾಡಿದರು. 

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ನಂದಿಕೋಲು, ಕೋಲಾಟ, ಕುಂಭ ಮೇಳ, ಮಜಲು, ಆನೆ, ಒಂಟೆ ಕುದುರೆ ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ಸಂಚರಿಸಿ ಭಕ್ತರಿಗೆ ಆಶೀವರ್ಾದ ನೀಡಿ ಮಠ ಪ್ರವೇಶ ಮಾಡಿದರು. 

ನಂತರ ಸಾಯಂಕಾಲ ರಂಗು ರಂಗಿನ ಸಾವಿರಾರು ಧ್ವಜಗಳಿಂದ ಅಲಂಕೃತಗೊಂಡ ರಥದ ಚಕ್ರಕ್ಕೆ ಫಕೀರ ಸಿದ್ದರಾಮ ಶ್ರೀಗಳು ಕಾಯಿ ಒಡೆಯುವದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಸಾಗುತ್ತಿದ್ದಂತೆ ನೆರೆದ ಲಕ್ಷಾಂತರ ಭಕ್ತರೆಲ್ಲ ಹರ ಹರ ಮಹಾದೇವ, ಜಗದ್ಗುರು ಫಕೀರೇಶ್ವರ ಮಹಾರಾಜ್ ಕೀ ಜೈ ಎಂಬ ಜೈಕಾರಗಳು ಮುಗಿಲು ಮುಟ್ಟುವಂತಿದ್ದವು. ರಥ ಬೀದಿಯಲ್ಲಿ ಜ. ಫಕೀರೇಶ್ವರ ತೇರು ಎಳೆದು ಭಕ್ತಿಯಿಂದ ಸಂಭ್ರಮಿಸಿದರು. 

ರಥೋತ್ಸವ ನೋಡಲು ಆಗಮಿಸಿದ್ದ ಭಕ್ತರೆಲ್ಲ ಚಲಿಸುತ್ತಿರುವ ಮಹಾ ರಥಕ್ಕೆ ಭಕ್ತಿಯಿಂದ ತಮ್ಮೆಲ್ಲರ ಮನೋ ಕಾಮನೆಗಳನ್ನು ಪೂರ್ಣಗೊಳಿಸುವಂತೆ ಮನದಲ್ಲಿ ಹರಕೆ ಮಾಡಿಕೊಳ್ಳುತ್ತಾ ಭಕ್ತಿಯಿಂದ ಉತ್ತತ್ತಿ, ನಿಂಬೆಹಣ್ಣು, ಮಾವಿನಹಣ್ಣು, ಬಾಳೆಹಣ್ಣು ಎಸೆದು ಭಕ್ತಿ ಭಾವಕ್ಕೆ ಸಾಕ್ಷಿಯಾದರು.

ನಂತರ ಫಕೀರ ಸಿದ್ದರಾಮ ಶ್ರೀಗಳು ರಥ ಹಾಗೂ ಭಕ್ತ ಸಮುದಾಯದ ಜತೆ ಹೆಜ್ಜೆ ಹಾಕುತ್ತಾ ಬನ್ನಿ ಕಟ್ಟೆಗೆ ಆಗಮಿಸಿ ಭಕ್ತರಿಗೆ ಆಶೀವರ್ಾದ ನೀಡಿದರು. 

ಈ ರಥೋತ್ಸವ ಕಾರ್ಯಕ್ರಮದಲ್ಲಿ ದೂರದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೊಟೆ, ಬಿಜಾಪೂರ, ಬೀದರ್, ರಾಯಚೂರ, ದ.ಕನ್ನಡ, ಶಿವಮೊಗ್ಗ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.