ನಗೆಸುವುದು ತುಂಬ ಕಷ್ಟದ ಕೆಲಸ: ಡಾ. ಸಿದ್ದನಗೌಡ ಪಾಟೀಲ *ಗೌಡರ ಹಾಸ್ಯಕ್ಕೆ ನಕ್ಕು ನಕ್ಕು ಸುಸ್ತಾದ ಜನ * ಹೊಟ್ಟೆ ಹುಣ್ಣಾಗಿಸಿದ ಗೌಡರು

ಲೋಕದರ್ಶನ ವರದಿ

ಬೆಳಗಾವಿ 13- ನಾನು ನಗೆಮಾತುಗಳನ್ನು ಕೇಳಿ ಆನಂದಿಸುವವನೇ ಹೊರತು ನಗೆಮಾತುಗಾರನಲ್ಲ. ಜನರನ್ನು ನಗಿಸುವುದು ತುಂಬ ಕಷ್ಟದ ಕೆಲಸ. ಆ ಕಷ್ಟದ ಕೆಲಸವನ್ನು ಹಾಸ್ಯಕೂಟ ಕಲಾವಿದರಿಂದು ಸಾಧ್ಯ ಮಾಡಿ ತೋರಿಸಿದ್ದಾರೆ. ಹಾಸ್ಯಲೋಕಕ್ಕೆ  ಒಳ್ಳೆಳ್ಳೆ ಹಾಸ್ಯಭಾಷಣಕಾರರನು  ನೀಡುತ್ತಿರುವ ಹಾಸ್ಯಕೂಟ ಕಾರ್ಯ ಶ್ಲಾಘನೀಯವಾದುದು ಎಂದು ಹಿರಿಯ ಕನ್ನಡ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಇಂದಿಲ್ಲಿ ಹೇಳಿದರು.

ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಜೋಕಿಗೊಂದು ಜೋಕ್ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಡಾ. ಸಿದ್ದನಗೌಡ ಪಾಟೀಲ ಮೇಲಿನಂತ ಅಭಿಪ್ರಾಯ ಪಟ್ಟರು.

ಪತಿ ಪತ್ನಿಯರ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಬರುತ್ತವೆ ಹೋಗುತ್ತವೆ ಆದರೆ ಪ್ರತಿ ದಿನ ಮುಂಜಾನೆ ಹಿಂದಿನ ದಿನದ ನೋವು, ತಾಪಗಳನ್ನು ಮರೆತು ಮತ್ತೆ ಹೊಸ ಜೀವನ ನಡೆಸುವುದೇ ಸುಖ ಸಂಸಾರದ ಗುಟ್ಟು ಎಂದು ಹೇಳಿದರು. ನನಗೆ ನಗೆಸಲು ಬರುವುದಿಲ್ಲವೆಂದ  ಡಾ. ಸಿದ್ದನಗೌಡರು ಪತ್ನಿಯೆಂದು ತಿಳಿದು ಬೇರೆ ಹೆಂಗಸೊಬ್ಬಳ  ಕೈ ಹಿಡಿದು ನಡೆದ  ವಿನೋದ ಪ್ರಸಂಗ ಹಂಚಿಕೊಂಡರು.  ಗೌಡರ ಅನುಭವಗಳನ್ನು ಕೇಳಿದ ಜನರ ನಗೆಯಲೆ ಮುಗಿಲು ಮುಟ್ಟಿತ್ತು. ಹೊಟ್ಟೆ ಹುಣ್ಣಾಗುವಂತೆ ಜನ ನಕ್ಕಿದ್ದೇ ನಕ್ಕದ್ದು.

ಕಾರ್ಯಕ್ರಮಕ್ಕೆ ಚಾಲನೆಯನ್ನು  ನೀಡಿದ ಲೇಖಕ ಶಿರೀಷ ಜೋಶಿ ಸಂಕ್ರಾಂತಿಯಲ್ಲಿ ಯಳ್ಳುಬೆಲ್ಲ, ದಸರೆಯಲ್ಲಿ  ಬಂಗಾರವನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತ ಬಂದ ಸಂಸ್ಕೃತಿ ನಮ್ಮದು. ಇತ್ತೀಚೆ ಎಸ್..ಎಂ.ಎಸ್. ಹಾಗೂ ವಾಟ್ಸಾಪ್ ಮುಖಾಂತರ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಹಾಸ್ಯಕೂಟದವರು ತಪ್ಪದೇ 57 ತಿಂಗಳಿಂದ ಬೆಳಗಾವಿ ಜನರೊಂದಿಗೆ ನಗೆಯನ್ನು ಹಂಚಿಕೊಳ್ಳುತ್ತ ಬಂದಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹಾಸ್ಯಕೂಟ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.

ಹಾಸ್ಯಕೂಟ ಕಲಾವಿದರಾದ  ಪ್ರೊ. ಜಿ. ಕೆ. ಕುಲಕಣರ್ಿ, ಅಶೋಕ ಮಳಗಲಿ, ಜಿ. ಎಸ್. ಸೋನಾರ, ಎಂ. ಬಿ. ಹೊಸಳ್ಳಿ  ಇವರು ಜೋಕಿಗೊಂದು ಜೋಕುಗಳನ್ನು ಹಂಚಿಕೊಳ್ಳುತ್ತ ಮಕ್ಕಳ ನಡುವೆ ನಡೆಯುವ ಹಾಸ್ಯ, ಗಂಡಹೆಂಡಿರ ನಡುವಿನ ಹಾಸ್ಯ, ಗ್ರಾಮೀಣ ಪ್ರದೇಶದ ನಗೆ ಪ್ರಸಂಗಗಳನ್ನು  ಹಂಚಿಕೊಂಡರು.

ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ ಬಂದಿದ್ದ ಎಸ್. ವಿ. ದೀಕ್ಷಿತ, ಅರವಿಂದ ಕಡಗದಕೈ, ಡಾ. ಜಿ. ಬಿ. ಪಡಗುರಿ, ಚೆನ್ನಬಸ್ಸಯ್ಯ ಕಠಾಪುರಿಮಠ, ಶ್ರೀಮತಿ ಸವಿತಾ ಪಾಟೀಲ, ಮಲ್ಲಿಕಾಜರ್ುನ ಸುಬ್ಬಾಪುರಮಠ, ಡಾ. ರಾಜೇಂದ್ರ ಮಠದ ಮುಂತಾದವರು ಪಾಲ್ಗೊಂಡು ಜೋಕಿಕೊಂದು ಜೋಕನ್ನು ಹಂಚಿಕೊಳ್ಳುತ್ತ ಜನರನ್ನು ನಗೆಸಿದರು. ಸುಮಾರು ಎರಡು ಗಂಟೆಗಳ ಕಾಲ ಜನರನ್ನು ರಂಜಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.

ಪ್ರಾಯೋಜಕತ್ವವನ್ನು ಹಿರಿಯ ಪತ್ರಕರ್ತರಾದ ಹುಕ್ಕೇರಿಯ ಪ್ರಕಾಶ ದೇಶಪಾಂಡೆಯವರು ವಹಿಸಿಕೊಂಡಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರವಿಂದ ಹುನಗುಂದ ನಿರೂಪಿಸಿದರು.