ನಮ್ಮ ಸಂಸ್ಕೃತಿಯನ್ನು ಬಿಟ್ಟ ವಿದೇಶಿ ಸಂಸ್ಕೃತಿಯನ್ನು ಅನುಸರಿಸುತ್ತಿರುವುದು ಸರಿಯಾದುದಲ್ಲ : ಶಿವಾಚಾರ್ಯ ಮಹಾಸ್ವಾಮಿ
ಬೀಳಗಿ 12: ಜನರ ಸಂಸ್ಕೃತಿ, ಸಂಸ್ಕಾರ, ಬದುಕನ್ನು ಬಿಂಬಿಸುವಂತವುದೇ ಜಾನಪದ. ನಾಡವರ ಸಂಸ್ಕಾರ, ಸಂಸ್ಕೃತಿ, ಜನಪದವನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು. ನಮ್ಮ ಸಂಸ್ಕೃತಿಯನ್ನು ಬಿಟ್ಟ ವಿದೇಶಿ ಸಂಸ್ಕೃತಿಯನ್ನು ಅನುಸರಿಸುತ್ತಿರುವುದು ಸರಿಯಾದುದಲ್ಲ ಎಂದು ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಗಿರಿಸಾಗರ ಗ್ರಾಮದ ಕಲ್ಯಾಣ ಹಿರೇಮಠದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ಬೀಳಗಿ ಸಹಯೋಗದಲ್ಲಿ ಗಿರಿಸಾಗರ ವಲಯ ಘಟಕ ಮತ್ತು ಗಿರಿಸಾಗರ ಗ್ರಾಮ ಘಟಕದ ಉದ್ಘಾಟನೆ, ಪದಗ್ರಹಣ, ಸನ್ಮಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಂವಿಧಾನ ನಡವಳಿಕೆಗಳನ್ನು ಅನುಸರಿದಂತೆ ನಮ್ಮ ಹಿರಿಯರು, ಅನುಭಾವಿಗಳು, ಜನಪದರು ನಮ್ಮ ನಾಡಿನ ಸಂಸ್ಕೃತಿಯನ್ನು, ಬದುಕಿನ ನೆಲೆಗಳನ್ನು, ಜೀವನದ ಕಲೆಗಳನ್ನು ಜಾನಪದದ ರೂಪದಲ್ಲಿ ಉಳಿಸಿ ಹೋಗಿದ್ದಾರೆಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಎಂ. ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಣ್ಮರೆಯಾಗುತ್ತಿರುವ ಗೋಂದಳಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಿರತರಾಗಿರುವ ಹಿರಿಯ ಜಾನಪದ ಕಲಾವಿದ ಡಾ. ವೆಂಕಪ್ಪ ಸುಗತೇಕರ ಅವರನ್ನು ಶಿರೂರ ಪಟ್ಟಣದಲ್ಲಿ ಜರುಗಿದ ಕನ್ನಡ ಜಾನಪದ ಪರಿಷತ್ ಪ್ರಥಮ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಶ್ರೀಯುತರಿಗೆ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು ಹೆಮ್ಮೆ ಮತ್ತು ಅಭಿಮಾನದ ಸಂಗತಿ ಎಂದರು.
ಕನ್ನಡ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ ದಾವಣಗೆರೆ ಮಾತನಾಡಿ, ಜನಪದ ಕಲೆ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕನ್ನಡ ಜಾನಪದ ಪರಿಷತ್ ಶ್ರಮಿತ್ತಿದ್ದು, ಸಮಾಜ ಕೈಜೋಡಿಸಿದಾಗ ಕಲೆ ಮತ್ತು ಕಲಾವಿದರು ಉಳಿಯಲಿದ್ದಾರೆಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಡಾ. ವೆಂಕಪ್ಪ ಸುಗತೇಕರ ಸಂಬಳ ನುಡಿಸಿ, ಶಿವನಾಮ ಪದ ಹಾಡುವ ಮೂಲಕ ಉದ್ಘಾಟಿಸಿದರು.
ಕನ್ನಡ ಜಾನಪದ ಪರಿಷತ್ ಗಿರಿಸಾಗರ ವಲಯ ಘಟಕದ ಅಧ್ಯಕ್ಷರಾಗಿ ಶ್ರೀಕಾಂತ ಸಂದಿಮನಿ ಹಾಗೂ ಕನ್ನಡ ಜಾನಪದ ಪರಿಷತ್ ಗಿರಿಸಾಗರ ಗ್ರಾಮ ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಮಾಡಿದರು.
ಹನುಮಂತ ಅರಸುಣಗಿ, ಆರ್.ಬಿ.ನಬಿವಾಲೆ, ಸುರೇಶ ವಸ್ತ್ರದ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಬಂಡಿವಡ್ಡರ, ಪಿಡಿಒ ವಿಮಲಾ ಕಲ್ಮಣಿ, ಬಸವರಾಜ ನಾಯ್ಕ, ಬಿ. ವೈ. ಹರದೊಳ್ಳಿ, ಆನಂದ ಬೊಮ್ಮನ್ನವರ, ಸಂಗಮೇಶ ಅಗಸರ ಇತರರು ಇದ್ದರು.