ಸಿಹಿಸುದ್ದಿ ಮಲ್ಲಿಕಾರ್ಜುನ ಖರ್ಗೆಗಾಯಿತೇ ಕಹಿ?; ಸಿದ್ದರಾಮಯ್ಯ ಹೂಡಿದರೆ ಪ್ರತಿತಂತ್ರ

 ಬೆಂಗಳೂರು.12 ತಾವು ನೀಡಿದ ಹೇಳಿಕೆಗೆ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಶ್ಚಾತ್ತಾಪ ಪಟ್ಟಿಕೊಳ್ಳುವಂತಾಗಿದೆ.ಡಿ  9 ರಂದು ಸಿಹಿ ಸುದ್ದಿ ನೀಡುತ್ತೇನೆಂದಿದ್ದ ಖರ್ಗೆಗೆ ಪಕ್ಷದ ನಾಯಕರು ಎಐಸಿಸಿ ಮುಖಂಡರು  ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಸಿದ್ದರಾಮಯ್ಯ ಮೇಲಿರುವ ಉಪಚುನಾವಣೆಯ ಸೋಲಿನ  ಹೊಣೆಯ ಮಲ್ಲಿಕಾರ್ಜುನ ಖರ್ಗೆಗೆ ತಿರುಗುಬಾಣವಾಗಿದೆ.ಕೆಲವು ದಿನಗಳ‌ ಹಿಂದೆ  ಚಿಕ್ಕಬಳ್ಳಾಪುರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಮಹಾರಾಷ್ಟ್ರ ಚುನಾವಣೆಯ  ಗೆಲುವಿನ ಹುರುಪಿನಲ್ಲಿದ್ದ ಖರ್ಗೆ ಡಿ‌, 9 ರಂದು ರಾಜ್ಯಕ್ಕೆ ಸಿಹಿಸುದ್ದಿ ನೀಡುವುದಾಗಿ  ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌‌ಸಿಪಿ,  ಕಾಂಗ್ರೆಸ್ ಮೈತ್ರಿಯಾದಂತೆ ರಾಜ್ಯದಲ್ಲಿಯೂ ಸಹ ಜೆಡಿಎಸ್-ಕಾಂಗ್ರೆಸ್ ಚುನಾವಣೋತ್ತರ  ಮೈತ್ರಿ ಮಾಡಿಕೊಳ್ಳುತ್ತವೆ ಎಂಬ ಸುದ್ದಿಯೂ ಹರಡಿತ್ತು. ಅದೇ ಸಂದರ್ಭದಲ್ಲಿ ಜೆಡಿಎಸ್  ವರಿಷ್ಠ ಎಚ್‌.ಡಿ.ದೇವೇಗೌಡ ಸಹ ಎಐಸಿಸಿ ನಾಯಕಿ ಸೋನಿಯಾಗಾಂಧಿ ಅವರನ್ನು  ಹೊಗಳಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ದೇವೇಗೌಡರ ನಡುವೆ ಉತ್ತಮ ಬಾಂಧ್ಯವ್ಯವೂ  ಇತ್ತು. ಆದರೀಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಖರ್ಗೆ ನೀಡಿದ್ದ ಸಿಹಿ ಸುದ್ದಿ  ನೀಡುತ್ತೇನೆ ಎಂಬ ಹೇಳಿಕೆಯೇ ಮುಳುವಾಯಿತು ಎಂದು ಸಿದ್ದರಾಮಯ್ಯ ಎಐಸಿಸಿಗೆ  ದೂರಿದ್ದಾರೆ. ಅಲ್ಲದೇ ಉಪಚುನಾವಣೆಯ ಆರಂಭದ‌ ಪ್ರಚಾರದಲ್ಲಿ ಪಾಲ್ಗೊಳ್ಳದ ಮಲ್ಲಿಕಾರ್ಜುನ  ಖರ್ಗೆ ಕೊನೆಯ ದಿನಗಳಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದು, ಕೊನೆಯ ಕ್ಷಣದಲ್ಲಿ ಜೆಡಿಎಸ್  ಜೊತೆ ಮತ್ತೆ ಮೈತ್ರಿ ಎಂಬಂತೆ ಪರೋಕ್ಷವಾಗಿ ಹೇಳಿಕೆ ನೀಡಿರುವುದಕ್ಕೆ  ಬೆಲೆ‌ತೆರುವಂತಾಗಿದೆ ಎಂದು ದೂರಿದ್ದಾರೆ.ಮೂಲಕಾಂಗ್ರೆಸಿಗರು ಟೀಕಿಸುವ ಮುನ್ನವೇ  ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಸೋಲಿಗೆ ನೈತಿಕ ಹೊಣೆಹೊತ್ತು ತಮ್ಮ  ಸ್ಥಾನಗಳಿಗೆ ರಾಜೀನಾಮೆ ನೀಡಿ ಜಾಣನಡೆಯನ್ನು ಅನುಸರಿಸಿಬಿಟ್ಟರು.ಅಲ್ಲದೇ  ತಮ್ಮೊಂದಿಗೆ ಪ್ರಚಾರದಿಂದ ಮೂಲ ಕಾಂಗ್ರೆಸಿಗರು ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆಯೂ  ಹಾಗೂ ಖರ್ಗೆ ಅವರ ಸಿಹಿಸುದ್ದಿಯ ಹೇಳಿಕೆ ಚುನಾವಣೆಯಲ್ಲಿ ಸೋಲಾದರೆ ತಾವಷ್ಟೆ  ಜವಾಬ್ದಾರನಾಗುವುದಿಲ್ಲ ಎಂಬ ಮುನ್ಸೂಚನೆಯನ್ನು ಸಿದ್ದರಾಮಯ್ಯ ಫಲಿತಾಂಶಕ್ಕೂ ಮುನ್ನವೇ  ಎಐಸಿಸಿಗೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ದಿನೇಶ್ ನೀಡಿರುವ  ರಾಜೀನಾಮೆಯನ್ನು ಹೈಕಮಾಂಡ್ ಇನ್ನೂ ಯಥಾಸ್ಥಿತಿಯಲ್ಲಿಟ್ಟಿದೆ. ಈ ಮಧ್ಯೆ ಸಿದ್ದರಾಮಯ್ಯ  ದಿಢೀರನೇ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆದಿದ್ದು ಸಿದ್ದರಾಮಯ್ಯ ಮೇಲಿದ್ದ ಆರೋಪದ‌  ತೂಗುಗತ್ತಿ ಈಗ ಮೂಲಕಾಂಗ್ರೆಸಿಗರ ಕಡೆ ಬೊಟ್ಟುಮಾಡುತ್ತಿದೆ.ರಾಜ್ಯ ಕಾಂಗ್ರೆಸ್  ಪಕ್ಷದ ಬೆಳವಣಿಗೆ ಬಗ್ಗೆ  ಬೇಸರ ವ್ಯಕ್ತಪಡಿಸಿದ ಖರ್ಗೆ, ಸಿದ್ದರಾಮಯ್ಯ, ಗುಂಡೂರಾವ್  ರಾಜೀನಾಮೆ ಬಗ್ಗೆ ಪ್ರತಿಕ್ರಿಯೆಗೆ ಹಿಂದೇಟು ಹಾಕಿದರು. ಕೆಲವು ದಿನಗಳ‌ ಹಿಂದಷ್ಟೆ  ಸಿದ್ದರಾಮಯ್ಯ ರಾಜೀನಾಮೆ ನೀಡಿದ ದಿನದಂದು ಆತ್ಮಾವಲೋಕನ ಅಗತ್ಯ ಎಂದು ಹೇಳಿಕೆ ನೀಡಿದ್ದ  ಖರ್ಗೆ ಆ ನಂತರದ ಬೆಳವಣಿಗೆ ಕಂಡು ಮೌನಿಯಾಗಿದ್ದಾರೆ.ಬೈ ಎಲೆಕ್ಷನ್ ಬಳಿಕ ಸಿಹಿ  ಸುದ್ದಿ ಕೊಡುತ್ತೇನೆ ಎಂಬ ತಮ್ಮ ಹೇಳಿಕೆಯನ್ನು ಕೆಲ ನಾಯಕರು ತಪ್ಪಾಗಿ  ಅರ್ಥೈಸಿಕೊಂಡಿದ್ದಾರೆ. ತಾವು ಸಿಹಿ ಸುದ್ದಿ ಎಂದಿದ್ದು ಪಕ್ಷದ ಗೆಲ್ಲಲಿದೆ ಎಂಬ  ಅರ್ಥದಲ್ಲಿ ಅಷ್ಟೆ. ಆದರೆ ಆ ಹೇಳಿಕೆ ನಮ್ಮಲ್ಲೇ ಒಡಕು ಮೂಡಿಸುವ ರೀತಿ ಅರ್ಥೈಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.