ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆ
ಕಾರವಾರ,ಮಾ.11 :- ಉತ್ತರ ಕನ್ನಡ ಜಿಲ್ಲೆಯ ನಬಾರ್ಡ್, ಕೆನರಾ ಬ್ಯಾಂಕ್ ಹಣಕಾಸು ಸಾಕ್ಷರತಾ ಕೇಂದ್ರದ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಶನಿವಾರ ಕಾರವಾರದ ಮೈರಾಡಾ ನವೋದಯ ಸಂಪನ್ಮೂಲ ಕೇಂದ್ರದಲ್ಲಿ ಆಚರಿಸಲಾಯಿತು. ಕಾರವಾರ ಪೊಲೀಸ್ ಠಾಣೆಯ ಪಿಎಸ್‌ಐ ಸಾರಿಕಾ ನಾಯಕ್, ಸೈಬರ್ ಸುರಕ್ಷತೆ ಮತ್ತು ಪೋಕ್ಸೋ ಕಾಯ್ದೆಯ ಕುರಿತು ಮತ್ತು ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಭಾರತಿ ವಸಂತ್, ಮಹಿಳಾ ಉದ್ಯಮಶೀಲತೆ ಮತ್ತು ಮಹಿಳಾ ಸಬಲೀಕರಣವನ್ನು ಗುರಿಯಾಗಿಟ್ಟುಕೊಂಡು ಭಾರತ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾತನಾಡಿದರು. ಡಿಡಿಎಂ ಸುಶೀಲ್ ನಾಯ್ಕ ಮಾತನಾಡಿ ಪಿಎಂ ಇಂಟರ್ನ್‌ಶಿಪ್ ಯೋಜನೆ, ಎನ್ಪಿಎಸ್, ವಾತ್ಸಲ್ಯ ಮತ್ತು ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಕುರಿತು ಜಾಗೃತಿ ಮೂಡಿಸಿದರು. ಕೆನರಾ ಬ್ಯಾಂಕ್ ಎಫ್‌ಎಲ್‌ಸಿ ಪಿಎಂ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂ ಸುರಕ್ಷಾ ಬಿಮಾ ಯೋಜನೆ, ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ವಾಸುದೇವ್, ಎಫ್.ಎಲ್.ಸಿ ಕೌನ್ಸಿಲರ್ ನಾಗರಾಜ್ ಶೇಟ್ ಮತ್ತು ಮೈರಾಡ್ ಸುಷ್ಮಾ ವೆರ್ಣೇಕರ್ ಹಾಗೂ 16 ಸ್ವಸಹಾಯ ಗುಂಪುಗಳ 35 ಮಹಿಳೆಯರು ಭಾಗವಹಿಸಿದ್ದರು.