ಜನರ ಸಮಸ್ಯೆಗೆ ಸ್ಪಂದಿಸದ ಮುಖ್ಯಾಧಿಕಾರಿ ವರ್ಗಾವಣೆಗೆೆ ಒತ್ತಾಯ
ಕಂಪ್ಲಿ 16: ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ಮಾಡದೇ, ಮೇಲಾಧಿಕಾರಿಗಳ ಗಮನಕ್ಕೆ ತಂದರೆ, ಅಂತವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುವ ಪ್ರವೃತಿಯನ್ನು ಕುಡುತಿನಿ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಹೊಂದಿದ್ದು, ಇಂತಹ ಅಧಿಕಾರಿಯನ್ನು ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ಕುಡುತಿನಿ ಗ್ರೀನ್ ಫೌಂಡೇಶನ್ ಅಧ್ಯಕ್ಷ ಕೆ.ರಮೇಶ ಒತ್ತಾಯಿಸಿದರು. ಅವರು ಭಾನುವಾರ ಕುಡುತಿನಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಗ್ರೀನ್ ಫೌಂಡೇಶನ್ ಸಂಸ್ಥೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಸಮಾಜ ಸೇವೆಯೇ ಮೂಲ ಉದ್ದೇಶವಾಗಿದೆ. ಪಟ್ಟಣದಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿದ್ದು, ಸೂಕ್ತಕ್ರಮ ಕೈಗೊಳ್ಳುವಂತೆ ಪಪಂ ಮುಖ್ಯಾಧಿಕಾರಿಗೆ ಅರ್ಜಿ ಸಲ್ಲಿಸಿದರೂ, ಏನು ಪ್ರಯೋಜನೆ ಇಲ್ಲ. ಆದ್ದರಿಂದ ಶನಿವಾರ ಕುಡುತಿನಿಗೆ ಸಂಸದ ಈ.ತುಕಾರಾಂ ಆಗಮಿಸಿದ ವೇಳೆ ಮುಖ್ಯಾಧಿಕಾರಿ ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತಿದ್ದಾರೆ. ಜನರ ಸಂಕಷ್ಟ ಹಾಗೂ ದೂರುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಇವರನ್ನು ವರ್ಗಾವಣೆ ಮಾಡಬೇಕೆಂಬ ಹಕ್ಕೋತ್ತಾಯವನ್ನು ಮಾಡಿದ್ವಿ. ಆದರೆ, ಮರುದಿನ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಾಧಿಕಾರಿ ನಮ್ಮ ಮೇಲೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಪದೇ ಪದೇ ವರ್ಗಾವಣೆಗೊಂಡು ವರ್ಗಾವಣೆಗೊಂಡು ಕುಡುತಿನಿಗೆ ಯಾವ ಉದ್ದೇಶದಿಂದ ಬರುತ್ತಿದ್ದಾರೆ ಅನುಮಾನಕ್ಕೆ ಪುಷ್ಠಿ ನೀಡುವಂತಾಗಿದೆ. ಈ ಹಿಂದೆ ಪಟ್ಟಣದಲ್ಲಿ ಗೌರಿಶಂಕರ ಎಂಬ ವ್ಯಕ್ತಿಯು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದಾಗ ಅವರ ಮೇಲೆ ಮುಖ್ಯಾಧಿಕಾರಿ ಅಸಭ್ಯ ವರ್ತನೆ ಮಾಡಿರುವುದುಂಟು. ಇಂತಹ ಅಧಿಕಾರಿಯಿಂದ ಅಭಿವೃದ್ಧಿ ಆಗುವುದಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಕೂಡಲೇ ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡಿ, ಆದೇಶಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಯುವ ಮುಖಂಡರಾದ ಪಿ.ವೆಂಕಟೇಶ, ಎಸ್.ಶಿವಶಂಕರಗೌಡ, ಎಂ.ವಿನೋದ ಇದ್ದರು.