ರಾಜ್ಯ ಸರ್ಕಾರಿ ನೌಕರರ 2026-27 ನೇ ಸಾಲಿನ ಜಿಲ್ಲಾ ಕ್ರೀಡಾಕೂಟ ಉದ್ಘಾಟನೆ
Inauguration of the District Sports Meet for State Government Employees for the year 2026-27
ನೌಕರರ ಕ್ರಿಯಾಶೀಲತೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆ, ಸಾಂಸ್ಕೃತಿ ಚಟುವಟಿಕೆಗಳು ಪುಷ್ಠಿ ನೀಡುತ್ತವೆ; ಒತ್ತಡ ನಿವಾರಣೆಗೆ ಪ್ರತಿಯೊಬ್ಬ ನೌಕರನ ವ್ಯಾಯಾಮ, ಕ್ರೀಡೆಗಳಲ್ಲಿ ಭಾಗವಹಿಸಬೇಕು: ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಧಾರವಾಡ ಜ.30: ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ನಿರಂತರ ಕಾರ್ಯದಿಂದಾಗಿ ಮಾನಸಿಕ ಮತ್ತು ದೈಹಿಕ ಒತ್ತಡಗಳು ಉಂಟಾಗುವುದು ಸಾಮಾನ್ಯ.
ಇವುಗಳ ನಿಯಂತ್ರಣ ಮತ್ತು ಆರೋಗ್ಯಕರ ಜೀವನ ಮತ್ತು ಗುಣಮಟ್ಟದ ಸೇವೆಗಾಗಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಮತ್ತು ಸಕ್ರೀಯವಾಗಿ ಭಾಗವಹಿಸಬೇಕು. ಸರ್ಕಾರಿ ನೌಕರರ ಸಂಘವು ಕ್ರೀಡಾಕೂಟದ ನಿಮಿತ್ತ್ಯ ಜಿಲ್ಲೆಯ ಎಲ್ಲ ಆಸಕ್ತ ನೌಕರರು ಒಂದೆಡೆ ಸೇರುವ ಅವಕಾಶವನ್ನು ಸೃಷ್ಟಿಸಿದೆ ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ಇಂದು (ಜ.30) ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟದಿಂದ ಆಯೋಜಿಸಿದ್ದ 2026-27 ನೇ ಸಾಲಿನ ಜಿಲ್ಲಾ ಕ್ರೀಡಾಕೂಟ ಹಾಗೂ ಸಾಂಸ್ಕೃತಿ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಸರಕಾರಿ ನೌಕರರು ಕಚೇರಿ ಕೆಲಸಕ್ಕೆ ಸೀಮಿತರಾಗದೇ, ಕ್ರೀಡೆ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಿಬೇಕು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಬೇಕು. ಮತ್ತು ವ್ಯಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಗಳಿಂದ ವ್ಯಕ್ತಿಯ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸರಕಾರಿ ಕರ್ತವ್ಯ ನಿರ್ವಹಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರಬೇಕು. ಅದನ್ನು ಕಾಪಾಡಬೇಕು ಎಂದು ಅವರು ಹೇಳಿದರು. ರಾಜ್ಯ ಸರಕಾರವು ಸರಕಾರಿ ನೌಕರರ ಆರೋಗ್ಯ ಸಂರಕ್ಷಣೆ ಹಾಗೂ ಸಕಾಲದಲ್ಲಿ ಸಹಾಯಕ್ಕಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಎಲ್ಲ ಸರಕಾರಿ ನೌಕರರು ಇದರ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.
ವೃತ್ತಿಯಲ್ಲಿ ಅನುಭವಿಸುವ ಮಾನಸಿಕ ಒತ್ತಡ, ಕೆಲಸದ ಒತ್ತಡ, ಇತರ ತೊಂದರೆ ತೊಡೆದು ಹಾಕಲು ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಧನಾತ್ಮಕ ಚಿಂತನೆ, ಧನಾತ್ಮಕ ಕಾರ್ಯಗಳಲ್ಲಿ ನಿರಂತರ ಭಾಗವಹಿಸಿ, ಇತರರಿಗೂ ಪ್ರೋತ್ಸಾಹ ನೀಡಬೇಕೆಂದು ಅವರು ಸರ್ಕಾರಿ ನೌಕರರಿಗೆ ತಿಳಿಸಿದರು.
ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಮಹಾಪೌರರಾದ ಜ್ಯೋತಿ ಪಾಟೀಲ ಅವರು ಮಾತನಾಡಿ, ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರಕಾರಿ ನೌಕರರ ಪಾತ್ರ ಮುಖ್ಯವಾಗಿದೆ. ಇಂದಿನ ಜನಕಲ್ಯಾಣ ಸರಕಾರಗಳು ಜನಸಾಮಾನ್ಯರ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಅವುಗಳನ್ನು ಅರ್ಹರಿಗೆ ತಲುಪಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ನೌಕರರ ಕ್ರೀಡೆ, ಸಾಂಸ್ಕೃತಿಕ ಕಾರ್ಯಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಾನಗರ ಪಾಲಿಕೆಯಿಂದ ಅನುದಾನ, ಅಗತ್ಯ ಸೌಕರ್ಯಗಳನ್ನು ಪೂರೈಸಿ, ಪ್ರೊತ್ಸಾಹ ನೀಡಲಾಗುತ್ತಿದೆ. ನೌಕರರ ನಿರಂತರ ಶ್ರಮ ಹಾಗೂ ಕಾರ್ಯ ವೈಖರಿಯಿಂದ ಸರಕಾರಿ ಸೇವೆಗಳು ಸಾರ್ವಜನಿಕರಿಗೆ ತಲುಪುತ್ತಿವೆ. ನೌಕರರು ಶಿಸ್ತು, ಸಂಯಮದಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸರ್ಕಾರಿ ನೌಕರರು ಭಾಗವಹಿಸಿದ್ದಾರೆ. ಅನೇಕ ಮಹನೀಯರು ಕ್ರೀಡಾಪಟುಗಳಿಗೆ ಟೀ ಶರ್ಟ, ಕ್ಯಾಪ್ ನೀಡಿ, ಪ್ರೋತ್ಸಾಹಿಸಿದ್ದಾರೆ. ದಾನಿಗಳಿಗೆ ಕೃತಜ್ಞತೆಗಳನ್ನು ಅವರು ತಿಳಿಸಿದರು. ಅತಿಥಿಗಳಾಗಿದ್ದ ಪೂರ್ಣಿಮಾ ನಾಯ್ಡು ಹಾಗೂ ವಿರೇಶ ಬ್ಯಾಹಟ್ಟಿ ಅವರು ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ರಮೇಶ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಸುರೇಶ ಜಟ್ಟೆನ್ನವರ ಕ್ರೀಡಾ ಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹಾಗೂ ಕ್ರೀಡಾ ಕಾರ್ಯದರ್ಶಿ ಪಿ.ಎಫ್.ಗುಡೆನಕಟ್ಟಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಧಾರವಾಡ ತಹಶಿಲ್ದಾರ ಡಾ. ಡಿ.ಎಚ್.ಹೂಗಾರ, ಧಾರವಾಡ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಂಗಾಧರ ಕಂದಕೂರ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಮೋಹನ ಶಿವಣ್ಣನವರ, ಧಾರವಾಡ ಗ್ರಾಮೀಣ ಮತ್ತು ಶಹರ ಕ್ಷೇತ್ರಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಸಂಘದ ಗೌರವಾಧ್ಯಕ್ಷ ಪ್ರಕಾಶ ಹಳಪೇಟ, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಖಜಾಂಚಿ ಮಂಜುನಾಥ ಯಡಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಹೊಲ್ತಿಕೋಟಿ,
ನೌಕರ ಸಂಘದ ತಾಲೂಕುಗಳ ಅಧ್ಯಕ್ಷರಾದ ವಿ.ಎಫ್.ಚುಳಕಿ, ಡಾ.ಪ್ರಲ್ಹಾದ ಗೆಜ್ಜಿ, ಜಗದೀಶ ವಿರಕ್ತಮಠ, ವಿಠ್ಠಲ ರಂಗಣ್ಣವರ, ಎಂ.ಎ.ತಹಶಿಲ್ದಾರ, ಮುತ್ತಪ್ಪ ಅಣ್ಣಿಗೇರಿ ಹಾಗೂ ಹಿರಿಯ ಉಪಾಧ್ಯಕ್ಷರಾದ ರಾಜಶೇಖರ ಕೋನರಡ್ಡಿ, ರಾಜಶೇಖರ ಹೊನ್ನಪ್ಪನವರ, ಗೀರೀಶ ಚೌಡಕಿ, ಡಾ. ಸುರೇಶ ಹಿರೇಮಠ, ಮಿಲಿಂದಕುಮಾರ್.ಎಂ. ನಾಯ್ಕ, ಕ್ರೀಡಾ ಕಾರ್ಯದರ್ಶಿಗಳಾದ ಸುರೇಶ ಜಟ್ಟೆನ್ನವರ, ಪಿ.ಎಫ್.ಗುಡೇನಕಟ್ಟಿ, ಅಯ್ಯಪ್ಪ ಮೊಖಾಶಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪಿ.ಬಿ.ಕುರಬೆಟ್, ಚಂದ್ರಶೇಖರ ತಿಗಡಿ ಅವರು ಇದ್ದರು.
ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಕ್ರೀಡಾಕೂಟದ ಧ್ವಜಾರೋಹಣ ನೇರವೇರಿಸಿದರು. ಮಹಾಪೌರರಾದ ಜ್ಯೋತಿ ಪಾಟೀಲ ಅವರು ಪಾರಿವಾಳ ಹಾರಿ ಬಿಟ್ಟರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಕ್ರೀಡಾಪಟು ಯಲ್ಲೂನಾಯಕ ಹಮಾಣಿ ಅವರ ತಂಡದಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು. ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ ರಾಜ್ಯಮಟ್ಟದಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಪಡೆದಿದ್ದ ಕ್ರೀಡಾಪಟುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು, ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ನೌಕರ ಸಿಬ್ಬಂದಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 