ಬೆಳಗಾವಿಯಲ್ಲಿ ರಾಷ್ಟ್ರಪತಿಗಳಿಂದ 30ರಂದು ಕ್ಯಾನ್ಸರ ಆಸ್ಪತ್ರೆಯ ಉದ್ಘಾಟನೆ

Inauguration of cancer hospital on 30th by President in Belgaum


ಬೆಳಗಾವಿಯಲ್ಲಿ ರಾಷ್ಟ್ರಪತಿಗಳಿಂದ 30ರಂದು ಕ್ಯಾನ್ಸರ ಆಸ್ಪತ್ರೆಯ ಉದ್ಘಾಟನೆ  

ಬೆಳಗಾವಿ : ಬೆಳಗಾವಿಯಲ್ಲಿ 300 ಹಾಸಿಗೆಗಳ ಸೌಲಭ್ಯವುಳ್ಳ 1 ಲಕ್ಷ 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕ್ಯಾನ್ಸರ ಆಸ್ಪತ್ರೆಯು ಪ್ರಾರಂಭಗೊಳ್ಳುತ್ತಿದ್ದು, ಈ ಭಾಗದ ಜನರಿಗೆ ಕ್ಯಾನ್ಸರ ಸಂಬಂಧಿತ ಖಾಯಿಲೆಗಳಿಗೆ ವಿಶ್ವ ಗುಣಮಟ್ಟದ ಸಮಗ್ರ ಚಿಕಿತ್ಸೆಯನ್ನು ನೀಡುವ ಮಹದಾಸೆ ಇಂದು ಪೂರ್ಣಗೊಳ್ಳುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೃಹತ ಕ್ಯಾನ್ಸರ ಆಸ್ಪತ್ರೆ ಇಂದು ತಲೆ ಎತ್ತಿ ನಿಂತಿದೆ. ಇದೇ ದಿ. 30ರಂದು ಮಧ್ಯಾಹ್ನ 4 ಗಂಟೆಗೆ ಈ ಆಸ್ಪತ್ರೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನಸೇವೆಗೆ ಅರ​‍್ಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.   

ಮಂಗಳವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವ ಅತಿಥಿಗಳಾಗಿ ಗೌರವಾನ್ವಿತ ರಾಜ್ಯಪಾಲ ಥಾವರಚಂದ ಗೆಹ್ಲೋತ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ ಶರಣಪ್ರಕಾಶ ಪಾಟೀಲ, ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ, ಶಾಸಕರಾದ ರಾಜು ಸೇಟ್, ಅಭಯ ಪಾಟೀಲ ಮತ್ತು ಕಾಹೇರನ ಉಪಕುಲಪತಿ ಡಾ. ನಿತಿನ ಗಂಗಾಣೆ, ದಾನಿಗಳಾದ ಡಾ. ಸಂಪತಕುಮಾರ ಶಿವಾನಗಿ ಹಾಗೂ ಡಾ. ಉದಯಾ ಶಿವಾನಗಿ ಅವರು ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ವಹಿಸಲಿದ್ದಾರೆ ಎಂದರು.   

ಕ್ಯಾನ್ಸರ ಆಸ್ಪತ್ರೆ ನಿರ್ಮಾಣಕ್ಕೆ ಸಹಯಾರ್ತವಾಗಿ ದಾನ ನೀಡಿದ ಡಾ. ಸಂಪತಕುಮಾರ ಶಿವಾನಗಿ ಹಾಗೂ ಡಾ. ಉದಯಾ ಶಿವಾನಗಿ ಅವರ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ. ಕ್ಯಾನ್ಸರ ಸಂಬಂಧಿತ ಖಾಯಿಲೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಹಾಗೂ ಎಲ್ಲ ಪ್ರಕ್ರಿಯೆಗಳನ್ನು ಮಾಡಬೇಕೆನ್ನುವ ಕನಸು ಈಗ ನನಸಾಗಿದೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಿಂಬಾಗದಲ್ಲಿ ಸುಸಜ್ಜಿತವಾದ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಕ್ಯಾನ್ಸರ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ಹೊಂದಿದೆ. ಕ್ಯಾನ್ಸರ ಚಿಕಿತ್ಸೆಗಾಗಿ ಬೇರೆ ಬೇರೆ ನಗರಗಳಿಗೆ ಅಲೆಯವದನ್ನು ತಪ್ಪಿಸಿ ಬಹುವಿಧ ಕ್ಯಾನ್ಸರಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿರುವ ಇಲ್ಲಿ ಕ್ಯಾನ್ಸರ ಸಂಬಂಧಿತ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯಿಂದ ಹಿಡಿದು, ಕೀಮೋಥೆರಪಿ, ರೆಡಿಯೋಥೆರಪಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸದಸ್ಯರ ಇಚ್ಚೆಯಂತೆ ಆಸ್ಪತ್ರೆಯು ಜನಸೇವೆಗೆ ತೆರೆದುಕೊಂಡಿದೆ.  

ರೊಬೊಟಿಕ್ ಶಸ್ತ್ರಚಿಕಿತ್ಸೆ : ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಶಸ್ತ್ರಚಿಕಿತ್ಸೆಗಾಗಿ ರೋಬೊಟಿಕ್ ಅಳವಡಿಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ರೋಗಿಗಳನ್ನು ಗುಣಮುಖಗೊಳಿಸುವಲ್ಲಿ ಸಹಕಾರಿಯಾಗಿದೆ. ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರೊಬೊಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರನ ಶಸ್ತ್ರಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಎಂದು ಕಂಡು ಬಂದಿದೆ.   

ರೊಬೊಟಿಕ್ ಶಸ್ತ್ರಚಿಕಿತ್ಸೆಯು ಲ್ಯಾಪರೊಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸೆ ಎರಡಕ್ಕೂ ಸೈ ಎನಿಸಿಕೊಂಡಿದೆ. ಭಾರತದಲ್ಲಿಯೇ ತಯಾರಿಸಿದ ಎಸ್‌ಎಸ್‌ಐ ತಂತ್ರಜ್ಞಾನ ಸರ್ಜಿಕಲ್ ರೊಬೊಟಿಕ್ ಇದಾಗಿದ್ದು, ಅತ್ಯಂತ ನಿಖರತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವಲ್ಲಿ ಶಸ್ತ್ರಚಿಕಿತ್ಸಾ ತಜ್ಞವೈದ್ಯರಿಗೆ ಸಹಕಾರಿಯಾಗಿದೆ.ಕಿರಿದಾದ ಸ್ಥಳಗಳಲ್ಲಿ ಮಿಲಿಮೀಟರ್‌-ಬೈ-ಮಿಲಿಮೀಟರ್ ನಿಖರತೆಯೊಂದಿಗೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ, ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವದಲ್ಲದೇ ಕ್ಯಾನ್ಸರ್ ಚಿಕಿತ್ಸೆಯ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ. ಅತ್ಯಾಧುನಿಕ ಅರಿವಳಿಕೆ ಯಂತ್ರಗಳು, ಸಿ.ಮ್ಯಾಕ್ ವೀಡಿಯೋ ಲಾರಿಂಗೋಸ್ಕೋಪ್‌ಗಳು, ಅಂಬು ಸ್ಕೋಪ್, ಬ್ರಾಂಕೋಸ್ಕೋಪ್‌ಗಳು ಮತ್ತು ಇತರ ತಾಂತ್ರಿಕವಾಗಿ ಸುಧಾರಿತ ಉಪಕರಣ, ಅರಿವಳಿಕೆ ತಂತ್ರಜ್ಞರ ಸಹಕಾರದಿಂದ ರೋಗಿಗಳಿಗೆ ಸುರಕ್ಷಿತ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದೆ.  

ತೀವ್ರ ನಿಗಾ ಘಟಕ : 300 ಹಾಸಿಗೆಗಳ ಆಸ್ಪತ್ರೆಯಲ್ಲಿ ಗಂಭೀರ ಪರಿಸ್ಥಿಯಲ್ಲಿ ಚಿಕಿತ್ಸೆ ನೀಡಲು ಅಗತ್ಯವಿರುವ ತೀವ್ರ ನಿಗಾ ಘಟಕವನ್ನು ತೆರೆಯಲಾಗಿದ್ದು, ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಒಳಗೊಂಡಿದೆ. 35 ಹಾಸಿಗೆಗಳ ತೀವ್ರ ನಿಗಾ ಘಟಕವಿದ್ದು, ಅತ್ಯಾಧುನಿಕವಾದ 5 ಶಸ್ತೊಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಲಾಗಿದೆ.   

ರೆಡಿಯೇಶನ್ ಥೆರಪಿ : ರೆಡಿಯೇಶನ ಚಿಕಿತ್ಸೆಯ ಆವಿಷ್ಕಾರವು ಕ್ಯಾನ್ಸರ ಚಿಕಿತ್ಸೆಯಲ್ಲಿ ವಿಶ್ವವನ್ನೇ ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು. ಇಂದು, ಕ್ಯಾನ್ಸರ್ ರೋಗಿಗಳಲ್ಲಿ ನಾಲ್ಕನೇ ಮೂರು ಭಾಗದಷ್ಟು ಜನರು ಕೆಲವು ರೀತಿಯ ರೇಡಿಯೊಥೆರಪಿಯಿಂದ ಗುಣಮುಖರಾಗುತ್ತಿದ್ದಾರೆ. ರೆಡಿಯೇಶನ್ ಆಂಕೊಲಾಜಿ ವಿಭಾಗವು ರೇಡಿಯಂ ಮತ್ತು ಕೋಬಾಲ್ಟ್‌ ಚಿಕಿತ್ಸೆಯಿಂದ ಹೆಚ್ಚಿನ ಶಕ್ತಿಯ ಎಕ್ಸ್‌-ರೇ ಲೀನಿಯರ್ ವೇಗವರ್ಧಕ ಚಿಕಿತ್ಸೆಯವರೆಗೆ ಬಹಳ ದೂರ ಸಾಗಿದೆ. ಸಿಟಿ, ಎಂ ಆರ್‌ಐ ಮತ್ತು ಪೆಟ್ ಸಿಟಿಯಂತಹ ಸುಧಾರಿತ ಇಮೇಜಿಂಗ್ ವಿಧಾನಗಳು ಗೆಡ್ಡೆಗಳನ್ನು ನಿಖರವಾಗಿ ಗುರುತಿಸುತ್ತವೆ. ಇಂಟೆನ್ಸಿಟಿ ಮಾಡ್ಯುಲೇಟೆಡ್ ರೇಡಿಯೊಥೆರಪಿ (ಐಎಂಆರ್ಟಿ), ವಾಲ್ಯೂಮೆಟ್ರಿಕ್ ಮಾಡ್ಯುಲೇಟೆಡ್ ಆರ್ಕ್‌ ಥೆರಪಿ (ವಿಎಂಎಟಿ), ಇಮೇಜ್ ಗೈಡೆಡ್ ರೇಡಿಯೊಥೆರಪಿ (ಐಜಿಆರ್ಟಿ), 4ಡಿ ರೆಸ್ಪಿರೇಟರಿ ಗೇಟೆಡ್ ಥೆರಪಿ ಮತ್ತು ಸ್ಟೀರಿಯೊಟಾಕ್ಟಿಕ್ ರೇಡಿಯೊಥೆರಪಿಯಂತಹ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿಖರವಾದ ಚಿಕಿತ್ಸೆಯು ವೇಗವಾಗಿ ಮತ್ತು ಕಡಿಮೆ ಸಮಯದಲ್ಲಿ ಸಾಧ್ಯವಾಗಿಸಿದೆ ಎಂದರು.  

ಭಾರತದಲ್ಲಿಯೇ ಪ್ರಥಮವಾಗಿ ಎಸ್‌ಆರ್‌ಎಸ್ ಕೋನ್ಸ, ಮೊಬಿಯಸ್ 3ಡಿ ವೆಲೊಸಿಟಿ ವೇಗದ ಸಮಗ್ರ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಎಂಡ್ ಹೈಪರ್‌ಆರ್ಕ್‌ ಟ್ರೂಬೀಮ್ ಹೊಂದಿದೆ. ಸ್ಟೀರಿಯೊಟಾಕ್ಟಿಕ್ ಆರ್ಟಿ-ನಿರ್ಣಾಯಕ ಸ್ಥಳಗಳಲ್ಲಿ ನಿಖರವಾದ ಚಿಕಿತ್ಸೆ. ವೇಗವಾದ ಚಿಕಿತ್ಸೆಯ ಸಮಯ. ಉಸಿರಾಟದ ಚಲನೆಯ ನಿರ್ವಹಣೆ, ಚಲಿಸುವ ಗೆಡ್ಡೆಗಳನ್ನು ಗುರಿಯಾಗಿಸುವುದು, ಜ್ಞಾನ ಆಧಾರಿತ ಯೋಜನೆಯು ದೋಷವನ್ನು ಕಡಿಮೆ ಮಾಡುತ್ತದೆ. ರೋಗಿಯ ನಿರ್ದಿಷ್ಟ ಗುಣಮಟ್ಟದ ಭರವಸೆಯೊಂದಿಗೆ ನಿಖರವಾದ ಡೋಸ್ ನೀಡಲು ಸಹಕರಿಸುತ್ತದೆ. ಅಲ್ಲದೆ ಬ್ರಾಕಿ ಚಿಕಿತ್ಸೆಗೆ ಸಹಕಾರಿಯಾಗುವ ಬೆಬಿಗ ಸಾಗಿನೊವಾ ಯಂತ್ರ ಅಳವಡಿಸಿದ್ದು ಇದರಿಂದ ಗಡ್ಡೆಮೇಲೆ ಮತ್ತು ಒಳಗೆ ನಿರ್ಧಾರಿತವಾದ ಚಿಕಿತೆ ನೀಡುತ್ತದೆ. ಸಮಗ್ರ ತಪಾಸಣೆಗಾಗಿ ಪಿಟಿಡಬ್ಲು ಮತ್ತು ಡೋಸಿಮೆಟ್ರಿ ಉಪಕರಣ, ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಐಸಿಬಿಸಿಟಿ ಹಾಲ್ಕಾಯನ್ ಇಲೈಟ್ ಯಂತ್ರ ಹಾಗೂ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಥಮವಾಗಿ ವೈಡ್ ಬೋರ್ ಸಿಟಿ ಸಿಮ್ಯುಲೇಟರ್ ಸಂಯೋಜಿತ ಲೇಸರ್ ಮತ್ತು 192 ಸ್ಲೈಸ್‌ಗಳ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿವೆ. 

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಾ. ವಿ.ಎಸ್‌.ಸಾಧುನವರ, ಪ್ರಾಚಾರ್ಯ ಡಾ. ಎನ್‌.ಎಸ್ ಮಹಾಂತಶೆಟ್ಟಿ, ಡಾ. ಎಂ.ವಿ ಜಾಲಿ, ಡಾ. ಕುಮಾರ ವಿಂಚುರಕರ, ಡಾ. ಇಮ್ತಿಯಾಜ, ಡಾ. ರಾಜೇಂದ್ರ ಮೆಟಗುಡಮಠ, ಡಾ. ರೋಹನ ಭಿಸೆ, ಡಾ. ಅಭಿಲಾಷಾ ಸಂಪಗಾರ ಸೇರದಂತೆ ಮುಂತಾದವರು ಉಪಸ್ಥಿತರಿದ್ದರು.