ಕಜಾಪ ಕುಂದರಗಿ ವಲಯ ಘಟಕ ಉದ್ಘಾಟನೆ : ಪದಗ್ರಹಣ, ಜಾನಪದ ಸಂಭ್ರಮ

Inauguration of Kajapa Kundaragi Zonal Unit

ಬೀಳಗಿ 22:  ಜನಪದ ಕಲೆ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕನ್ನಡ ಜಾನಪದ ಪರಿಷತ್ ಕೆಲಸ ಮಾಡುತ್ತಿದ್ದು, ಸರ್ವರೂ ಪ್ರಯತ್ನ ಪಟ್ಟಲ್ಲಿ ಕಲೆ ಮತ್ತು ಕಲಾವಿದರು ಕೂಡ ಉಳಿಯಲಿದ್ದಾರೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಎಂ. ಸಾವಕಾರ ಹೇಳಿದರು. 

 ತಾಲೂಕಿನ ಬೂದಿಹಾಳ (ಎಸ್‌.ಎಚ್‌.) ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ ಹಾಗೂ  ತಾಲೂಕು ಘಟಕ ಬೀಳಗಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ಪರಿಷತ್ ವಲಯ ಘಟಕ ಕುಂದರಗಿ ಇದರ ಉದ್ಘಾಟನೆ, ಪದಗ್ರಹಣ, ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಜಾನಪದ ಕಲೆಯು ನಮ್ಮ ಹಿರಿಯರು ನೀಡಿದ ಬಳವಳಿಯಾಗಿದ್ದು, ಜಾನಪದ ಕಲೆಗಳಿಗೆ ತನ್ನದೇಯಾದ ವೈಶಿಷ್ಟ್ಯತೆ ಹೊಂದಿದೆ. ಮೂಲ ಜಾನಪದ ಕಲೆಗಳನ್ನು ಉಳಿಸಬೇಕು ಮತ್ತು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯುವಕರು ಮೋಬೈಲ್, ವಾಟ್ಸಾಪಗಳತ್ತ ಮಾರು ಹೋಗದೆ, ನಮ್ಮ ಹಿರಿಯರು ಬಿಟ್ಟು ಹೋಗಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ನವ ಪೀಳಿಗೆಗೆ ಪರಿಚಯಿಸುವುದು ಅವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು. 

ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಆಡಕವಾಗಿವೆ. ಗ್ರಾಮೀಣರ ಮಧ್ಯೆ ಜಾನಪದ ಗೀಗಿಪದ, ಡೊಳ್ಳಿನ ಪದ, ಭಜನಾಪದ, ರಾಶಿಪದ ಸೋಬಾನ ಪದಗಳನ್ನು ನಿತ್ಯದ ಕಾಯಕ ದೊಂದಿಗೆ ಹಾಡುತ್ತಿದ್ದರು ಎಂದರು. 

 ಭಾರತೀಯ ಕಿಸಾನ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧವಿದೆ. ಇವತ್ತಿನ ಆಧುನಿಕ ಕಾಲಘಟ್ಟದಲ್ಲಿ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಜಾನಪದ ಕಲೆ, ಸಾಹಿತ್ಯ ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಜಾನಪದ ಪರಿಷತ್ ಶ್ರಮಿಸುತ್ತಿದೆ ಎಂದರು. 

 ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ದಾವಣಗೆರೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಕುಂದರಗಿ ವಲಯ ಘಟಕದ ಅಧ್ಯಕ್ಷರಾಗಿ ಕಲಾವಿದ ಪಾಂಡಪ್ಪ ಕನಸಗೇರಿ ಮತ್ತು ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. ವಿವಿಧ ಕಲಾವಿದರ ಜಾನಪದ ಕಲಾ ಪ್ರದರ್ಶನ ನೆರೆದ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು.  

 ಮುಖ್ಯ ಅತಿಥಿಗಳಾಗಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್‌. ಬಿ. ನಬಿವಾಲೆ, ಸಂಘಟನಾ ಕಾರ್ಯದರ್ಶಿ ಶಂಕರ ಡಬರಿ, ಸಂತೋಷ ಕಿವುಡಜಾಡರ, ಶಿವಪ್ಪ ಉಳ್ಳಾಗಡ್ಡಿ, ರಂಗಪ್ಪ ಕುರಿ, ಚಂದ್ರು ವೈ. ಎ., ಸದಾಶಿವ ಆಗೋಜಿ, ಮುತ್ತು ಗಾಣಗೇರ, ನಾಗಯ್ಯ ಮಠಪತಿ, ಚಂದಪ್ಪ ಬೋಕಿ, ವೆಂಕಟೇಶ ಪೂಜಾರಿ, ದ್ಯಾಮಣ್ಣ ಬಡಿಗೇರ, ಅಡಿವೆಪ್ಪ ಡಬರಿ, ತಿಮ್ಮಣ್ಣ ಬೆಣ್ಣೂರ, ಭೀಮಶಿ ಗಾಣಗೇರ, ಲೆಂಕೆಪ್ಪ ಮೇತ್ರಿ, ರಾಕೇಶ ಪೂಜಾರಿ ಮತ್ತಿತರಿದ್ದರು.