ಇಂಜಿನಿಯರ್ 24 ಹುದ್ದೆಗಳ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ನಡೆಸಿರುವ ಭಾರೀ ಅಕ್ರಮ
ಬಳ್ಳಾರಿ 17: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 24 ಹುದ್ದೆಗಳ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ನಡೆಸಿರುವ ಭಾರೀ ಅಕ್ರಮವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಈ 24 ಹುದ್ದೆಗಳ ನೇಮಕಾತಿಯಾಗಿ 2023 ಜುಲೈ 1 ಮತ್ತು 2ರಂದು ಪರೀಕ್ಷೆ ನಡೆಸಿ ಸೆಪ್ಟೆಂಬರ್ ತಿಂಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಈ ಬಗ್ಗೆ ಅನೇಕ ದೂರಗಳು ಬಂದಿದ್ದ ಕಾರಣ ಕೆಪಿಎಸ್‌ಸಿ ನೇಮಕ ಮಾಡಿದ ತನಿಖಾ ಸಮಿತಿಯು ಈ ಪ್ರಕರಣವನ್ನು ಬಯಲಿಗೆಳೆದಿದೆ. ನಮ್ಮ ಸಂಘಟನೆ ಎಐಡಿವೈಒ ಮೊದಲಿಂದಲೂ ಇಂತಹ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದೆ. ನೇಮಕಾತಿಗಾಗಿ ನಿಷ್ಪಕ್ಷಪಾತ, ನ್ಯಾಯ ಸಮ್ಮತ, ಪಾರದರ್ಶಕ ಪರೀಕ್ಷೆಗಳನ್ನು ನಡೆಸಲು ಹಲವಾರು ಬಾರಿ ಧ್ವನಿಯೆತ್ತಿದೆ. ಆದರೂ ಕೂಡ ಇಂತಹ ಅಕ್ರಮಗಳಿಗೆ ಕಡಿವಾಣವಿಲ್ಲದಂತಾಗಿದೆ. ಅಂತಹ ಹಲವು ಪ್ರಕರಣಗಳಲ್ಲಿ ಇದು ಕೂಡ ಒಂದಾಗಿದೆ. ಇದು ನ್ಯಾಯ ಸಮ್ಮತವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ದಿಗ್ಭ್ರಮೆ ಹಾಗೂ ಆಘಾತವನ್ನು ಉಂಟು ಮಾಡಿದೆ. ಯಾವುದೇ ಪ್ರಲೋಭನಗಳಿಗೆ ಒಳಗಾಗದೆ ತನಿಖಾ ಸಮಿತಿಯು ಈ ಅಕ್ರಮವನ್ನು ಬಯಲುಗೆಳಿದಿರುವುದನ್ನು ಪ್ರಶಂಸಿಸುತ್ತಲೇ ತನಿಖಾ ಸಮಿತಿಯು ನೀಡಿದ ಎಲ್ಲ ಶಿಫಾರಸುಗಳನ್ನು ರಾಜ್ಯ ಸರ್ಕಾರವು ಕೂಡಲೇ ಜಾರಿಗೆ ತರಬೇಕು. ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯನ್ನು ನಡೆಸಿ ಈ ಅಕ್ರಮದಲ್ಲಿ ಭಾಗಿಯಾದ 10 ಅಭ್ಯರ್ಥಿಗಳು ಹಾಗೂ ಅವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನು ಬಯಲಿಗೆಳೆದು ಅವರಿಗೆ ಉಗ್ರ, ನಿದರ್ಶನೀಯ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕೆಂದು ನಮ್ಮ ಸಂಘಟನೆಯು ಈ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.