9ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಡಾ. ಕುಶಾಲ ಕೆ. ದಾಸ ಅವರಿಗೆ ಈ ಪ್ರಶಸ್ತಿ ಪ್ರಧಾನ
ವಿಜಯಪುರ 11: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಶರೀರಕ್ರಿಯಾ ವಿಭಾಗದ ಗೌರವಾನ್ವಿತ ಪೀಠದ ಪ್ರಾಧ್ಯಾಪಕ(ಡಿಸ್ಟಿಂಗ್ವಿಷಡ್ ಚೇರ್ ಪ್ರೊಫೆಸರ್) ಡಾ. ಕುಶಾಲ ಕೆ. ದಾಸ್ ಅವರಿಗೆ ದಕ್ಷಿಣ ಏಷಿಯಾ ಶರೀರಕ್ರಿಯಾ ಸಂಘದ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ-2024 ನೀಡಲಾಗಿದೆ.ಪಾಕಿಸ್ತಾನದ ಲಾಹೋರಿನ ಯುನಿವರ್ಸಿಟಿ ಕಾಲೇಜ್ ಆಫ್ ಮೆಡೀಸೀನ್ ನಲ್ಲಿ ನಡೆಯುತ್ತಿರುವ ಸಂಘದ 9ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಇಂದು ಬುಧವಾರ ಡಾ. ಕುಶಾಲ ಕೆ. ದಾಸ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.2007ರಲ್ಲಿ ಪ್ರಾರಂಭವಾದ ದಕ್ಷಿಣ ಏಷಿಯಾ ಶರೀರಕ್ರಿಯಾ ಸಂಘದ ಮುಖ್ಯ ಕಚೇರಿ ಶ್ರೀಲಂಕಾದ ಕೊಲೊಂಬೊದಲ್ಲಿದ್ದು, ಡಾ. ಕುಶಾಲ ಕೆ. ದಾಸ ಅವರು ಈ ಸಂಘದ ಸಹಸಂಸ್ಥಾಪಕರಾಗಿದ್ದಾರೆ. ಅಲ್ಲದೇ, 2021 ರಿಂದ 2023ರ ವರೆಗೆ ಈ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಸಂಘ ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ಭೂತಾನ ದೇಶಗಳನ್ನು ಒಳಗೊಂಡಿದೆ. ಡಾ. ಕುಶಾಲ ಕೆ. ದಾಸ ಅವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ. ಬಿ. ಪಾಟೀಲ ಅವರು ಅಭಿನಂದನೆ ಸಲ್ಲಿಸದ್ದಾರೆ. ಅಲ್ಲದೇ, ಡಾ. ಕುಶಾಲ ಕೆ. ದಾಸ ಅವರಿಗೆ ಪ್ರಶಸ್ತಿ ಲಭಿಸಿರುವುದು ವಿಜಯಪುರ ಜಿಲ್ಲೆಯಷ್ಟೇ ಅಲ್ಲ, ಕರ್ನಾಟಕ ಮತ್ತು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಡಾ. ಕುಶಾಲ ಕೆ. ದಾಸ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ.