ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆ

Implementation of Five Guarantee Schemes: District Level Progress Review Meeting

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆ 

ಕೊಪ್ಪಳ 19: ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಶೀಘ್ರದಲ್ಲೇ ಉಳಿದ ಕಂತಿನ ಸಹಾಯ ಧನ ಪಾವತಿಯಾಗಲಿದೆ ಎಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರು.  

ಅವರು ಬುಧವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್‌.ಪಟೇಲ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜನ ಸಾಮಾನ್ಯರ ಏಳಿಗೆಗಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳನ್ನು ಕೊಪ್ಪಳ ಜಿಲ್ಲೆಯಲ್ಲಿ ಸಮರ​‍್ಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಜೊತೆಗೆ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿ ಉತ್ತಮ ಸ್ಥಾನ ಪಡೆದಿದೆ. ಕುಟುಂಬದ ಯಜಮಾನಿಗೆ ಮಾಸಿಕ ರೂ. 2000 ಸಾವಿರಗಳ ಧನ ಸಹಾಯ ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಬಾಕಿ ಇರುವ ಸಹಾಯ ಧನ ಮೊತ್ತವು ಸರ್ಕಾರದಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೀಘ್ರವೇ ಜಮೆಯಾಗಲಿದ್ದು, ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಗ್ರಾಹಕರ ಸೇವಾ ಕೇಂದ್ರಗಳ ಮೂಲಕ ಗ್ರಾಮೀಣ ಭಾಗದಲ್ಲಿ ಜನರು ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ತೆಗೆದುಕೊಳ್ಳುತ್ತಾರೆ. ಆದರೆ, ಹಣ ತೆಗೆದುಕೊಡುವ ವೇಳೆಯಲ್ಲಿ ಜನರಿಂದ ಕಮಿಷನ್ ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಪರೀಶೀಲಿಸಿ ಕ್ರಮ ಕೈಗೊಳ್ಳಬೇಕು. ಇದಲ್ಲದೇ ಗೃಹಲಕ್ಷ್ಮೀ ಹಣ ಪಾವತಿಗಾಗಿ ಬ್ಯಾಂಕುಗಳಲ್ಲಿನ ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೆಜರ್‌ಗಳು ಎಲ್ಲಾ ಬ್ಯಾಂಕ್ ಅಧಿಕಾರಿಗಳ ಸಭೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಬಿಲ್ ಬಾಕಿ ವಸೂಲಾತಿ ಸಂದರ್ಭದಲ್ಲಿ ಜನರಲ್ಲಿ ಮಾನವಿಯತೆಯಿಂದ ವರ್ತಿಸುವಂತೆ ಜೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಸರಿಯಾದ ಸಮಯದಲ್ಲಿ ವಿತರಣೆ ಮಾಡಬೇಕು ಎಂದರು. 

ಯುವನಿಧಿ ಯೋಜನೆಯಡಿ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ನೋಂದಣಿಯಾಗಿದೆ. ಯುವಕರಿಗೂ ಸೌಲಭ್ಯಗಳು ಸಿಗಬೇಕೆಂಬುವುದು ಸರ್ಕಾರದ ಮುಖ್ಯ ಉದ್ಯೋಶವಾಗಿದ್ದು, ಅರ್ಹ ಫಲಾನುಭವಿಗಳಿಗೆ ಜಾಗೃತಿ ಮೂಡಿಸಿ ಈ ಯೋಜನೆಯಡಿ ಇನ್ನೂ ಹೆಚ್ಚಿನ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 6 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಇಲ್ಲಿಯವರೆಗೆ ಪಡೆದುಕೊಂಡಿದ್ದಾರೆ. ಕಛೇರಿ, ಶಾಲಾ-ಕಾಲೇಜುಗಳಿಗೆ ಬರುವ ಹೋಗುವ ಅವಧಿಯಲ್ಲಿ ಬಸ್ ಟ್ರಿಪ್ ಸಂಖ್ಯೆಗಳನ್ನು ಹೆಚ್ಚಿಸಿ, ಬಸ್ ನಿಲ್ದಾಣಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪಂಚ ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯ ಯಾವುದೇ ಅರ್ಹ ಫಲಾನುಭವಿಗಳು ಹೊರಗುಳಿಯದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅರ್ಹರಿಗೆ ಯೋಜನೆಗಳ ಲಾಭ ದೊರಕಿಸಿ, ಜಿಲ್ಲೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.  

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ಜನಪರವಾದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಮರ​‍್ಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಬದುಕು ಕಟ್ಟಿಕೊಂಡು, ಇತರರಿಗೆ ಮಾದರಿಯಾದ ಫಲಾನುಭವಿಗಳ ಯಶೋಗಾಥೆಗಳ ಮಾಹಿತಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ ಅವರು ಮಾತನಾಡಿ, ಕೊಪ್ಪಳ ಕೇಂದ್ರ ಬಸ್‌ನಿಲ್ದಾಣದಲ್ಲಿರುವ ಶೌಚಾಲಯಗಳು ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಿಲ್ಲ. ಅವುಗಳ ಸ್ವಚ್ಛತೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಯುವನಿಧಿ ಯೋಜನೆಯಡಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳ ಮಾಹಿತಿ ಪಡೆದು ಅವರಿಗೆ ಯೋಜನೆಯಡಿ ನೋಂದಾಯಿಸಬೇಕು. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುನ್ನಾ ಜಿಲ್ಲಾ ಮತ್ತು ಆಯಾ ತಾಲ್ಲೂಕಿನ ಗ್ಯಾರಂಟಿ ಸಮಿತಿಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದರು.   

ಐದು ಗ್ಯಾರಂಟಿ ಯೋಜನೆಗಳ ಪ್ರಗತಿ: ಗೃಹಲಕ್ಷ್ಮೀ ಯೋಜನೆಯಡಿ ಕೊಪ್ಪಳ ಜಿಲ್ಲೆಯ 3,13,734 ಫಲಾನುಭವಿಗಳಿಗೆ ಅಕ್ಟೋಬರ್‌-2024ರ ಅಂತ್ಯದವರೆಗೆ ಡಿಬಿಟಿ ಮೂಲಕ 905.1 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜನವರಿ-2025ರ ಅಂತ್ಯದವರೆಗೆ 2,77,379 ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆತಿದ್ದು, ಇದಕ್ಕಾಗಿ 198.82 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಅನ್ನಾಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಿಗೆ ಅಕ್ಟೋಬರ್‌-2024ರ ಅಂತ್ಯದವರೆಗೆ 2,97,565 ಕಾರ್ಡುದಾರರಿಗೆ 278.34 ಕೋಟಿ ರೂ.ಗಳ ವೆಚ್ಚ ಭರಿಸಲಾಗಿರುತ್ತದೆ. ಶಕ್ತಿಯೋಜನೆಯಡಿ ಜನವರಿ-2025ರ ಅಂತ್ಯದವರೆಗೆ 6 ಕೋಟಿ 39 ಲಕ್ಷದ 40 ಸಾವಿರ 995 ಮಹಿಳೆಯರು ಕಲ್ಯಾಣ ಕರ್ನಾಟ ರಸ್ತೆ ಸಾರಿಗೆ ಸಂಸ್ಥೆಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ 223.11 ಕೋಟಿ ರೂ.ಗಳ ಖರ್ಚಾಗಿದೆ. ಯುವನಿಧಿ ಯೋಜನೆಯಡಿ ಇಲ್ಲಿಯವರೆಗೆ (ಫೆಬ್ರವರಿ-2025) 7943 ನೋಂದಣಿಯಾಗಿದ್ದು, ಒಟ್ಟು ಮೊತ್ತ ರೂ. 8.75 ಕೋಟಿಗಳನ್ನು ಪಾವತಿಸಲಾಗಿರುತ್ತದೆ ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.  

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್‌.ಟಿ ಖಾದ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೇರಿದಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ತಾಲ್ಲೂಕು ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.