ಎಐ ಪ್ರಭಾವ: ಗಣಿಗಾರಿಕೆ ತಂತ್ರಜ್ಞಾನದಲ್ಲಿ ಹೊಸ ಯುಗ: ಡಾ. ಎ.ಕೆ. ಮಜುಂದಾರ್‌

Impact of AI: A New Era in Mining Technology: Dr. A.K. Majumdar

ಎಐ ಪ್ರಭಾವ: ಗಣಿಗಾರಿಕೆ ತಂತ್ರಜ್ಞಾನದಲ್ಲಿ ಹೊಸ ಯುಗ: ಡಾ. ಎ.ಕೆ. ಮಜುಂದಾರ್‌

ಸಂಡೂರು 21: ಪ್ರಪಂಚ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಎಐ ಪ್ರಭಾವದಿಂದಾಗಿ ಗಣಿಗಾರಿಕೆ ಮತ್ತು ಖನಿಜ ಸಂಸ್ಕರಣೆಯ ವಿಧಾನಗಳಲ್ಲಿ ಹೊಸ ಯುಗ ಆರಂಭಗೊಂಡಿದೆ" ಎಂದು ಖರಗ್ಪುರ ಐಐಟಿಯ  ಗಣಿಗಾರಿಕೆ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಎ.ಕೆ. ಮಜುಂದಾರ್ ಅವರು ಅಭಿಪ್ರಾಯಪಟ್ಟರು.  

 ನಂದಿಹಳ್ಳಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರದಂದು ಆಯೋಜಿಸಲಾದ ’ಖನಿಜ ಸಂಸ್ಕರಣಾ ಉದ್ಯಮದಲ್ಲಿ ಸ್ವಯಂಚಾಲಿತ ಮತ್ತು ಸಂವೇದಕ ತಂತ್ರಜ್ಞಾನಗಳ ಅನುಷ್ಠಾನ’ ವಿಷಯದ ತಜ್ಞ ಉಪನ್ಯಾಸದಲ್ಲಿ ಅವರು ವಿದ್ಯಾರ್ಥಿಗಳು ಮತ್ತು ಬೋಧಕ ವೃಂದವನ್ನು ಉದ್ದೇಶಿಸಿ ಮಾತನಾಡಿದರು. "ಮೆಷಿನ್ ಲರ್ನಿಂಗ್ ಮತ್ತು ಕಂಪ್ಯೂಟರ್ ವೀಕ್ಷಣೆ ತಂತ್ರಜ್ಞಾನಗಳ ಮೂಲಕ ಖನಿಜಗಳನ್ನು ತಕ್ಷಣವೇ ಗುರುತಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ವಿಂಗಡಿಸಬಹುದು. ಇದು ಉತ್ಪಾದಕತೆ ಹೆಚ್ಚಿಸುವ ಜೊತೆಗೆ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ.  

ಎಐ-ಆಧಾರಿತ ನಿರ್ಧಾರ ಕೈಗೊಳ್ಳುವಿಕೆ, ದೂರ ನಿಯಂತ್ರಣ ಹಾಗೂ ಸ್ವಾಯತ್ತ ಪ್ರಕ್ರಿಯಾ ನಿರ್ವಹಣೆಯು ಖನಿಜ ಸಂಸ್ಕರಣಾ ಉದ್ಯಮವನ್ನು ಆಧುನೀಕರಣಗೊಳಿಸುತ್ತಿವೆ . ಆಟೋಮೇಷನ್  ತಜ್ಞರು, ಎಐ ಇಂಜಿನಿಯರ್ಗಳು ಮತ್ತು ಡೇಟಾ ವಿಶ್ಲೇಷಕರಿಗೆ ಹೆಚ್ಚಿನ ಬೇಡಿಕೆ ಇದೆ" ಎಂದು ಅವರು ಅಭಿಪ್ರಾಯಪಟ್ಟರು.  ಇದೇ ಸಂದರ್ಭದಲ್ಲಿ ಖನಿಜ ಸಂಸ್ಕರಣ ವಿಭಾಗ ಮತ್ತು ಕ್ಯೂಮಿ ಸೆರಾಮಿಕ್ಸ್‌ ಉದ್ಯಮದ ನಡುವೆ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಲಾಯಿತು.  

ಖನಿಜ ಸಂಸ್ಕರಣಾ ವಿಭಾಗದ ಮುಖ್ಯಸ್ಥ ಡಾ. ಎಸ್‌.ಎಂ. ಶಶಿಧರ ಅಧ್ಯಕ್ಷತೆ ವಹಿಸಿ ಮಾತನಾಡಿ ಎಐ ಆಧಾರಿತ ಸ್ವಯಂಚಾಲಿತ ವ್ಯವಸ್ಥೆ, ಉದ್ಯಮದೊಂದಿಗೆ ಬಾಂಧವ್ಯ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಅವಲಂಬನೆಯ ಅಗತ್ಯತೆಯ ಬಗ್ಗೆ ಒತ್ತಿಹೇಳಿದರು. ಡಾ. ಶರತ್ ಕುಮಾರ್ ಸ್ವಾಗತ ಭಾಷಣ ಮಾಡಿದರು. ಕ್ಯೂಮಿ ಉದ್ಯಮದ ಪ್ರತಿನಿಧಿ ಭರತ್, ನಿವೃತ್ತ ಪ್ರಾಧ್ಯಾಪಕ  ಡಾ. ಎಸ್‌.ಜೆ. ಗೋಪಾಲ ಕೃಷ್ಣ, ಅಧ್ಯಾಪಕರಾದ ಡಾ. ಬಸವರಾಜ ಹಟ್ಟಿ, ಡಾ. ಅಶ್ವಿನ್ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆರಂಭದಲ್ಲಿ ಅಧ್ಯಾಪಕಿ ಲತಾ ಜಿ.ಕೆ. ಪ್ರಾರ್ಥನೆ ಸಲ್ಲಿಸಿದರು, ಮತ್ತು ವಿದ್ಯಾರ್ಥಿಗಳಾದ ನಂದೀಶ್ ಮತ್ತು ರುಮಾನಾ  ಕಾರ್ಯಕ್ರಮವನ್ನು ನಿರೂಪಿಸಿದರು.