ಶಶಿಧರ ಶಿರಸಂಗಿ
ಶಿರಹಟ್ಟಿ 15: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಇತ್ತೀಚೆಗೆ ವಿದೇಶಿ ವಲಸೆ ಪಕ್ಷಿಗಳ ತಾಣವೆಂದು ರಾಜ್ಯ ಸರ್ಕಾರದಿಂದ ಅಧೀಕೃತವಾಗಿ ಅನುಮೋದಿಸಲ್ಪಟ್ಟಿದೆ, ವಿದೇಶಗಳಿಂದ ಸಾವಿರಾರು ಪಕ್ಷಿಗಳು ಮಾಗಡಿ ಕೆರೆಯನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಿರುವುದು ಇತಿಹಾಸವಾಗಿದೆ. ಆದರೆ ಇದಕ್ಕೆ ವಿರುದ್ಧವಾದ ಸಂಗತಿಯೆಂದರೆ, ಈ ಕೆರೆಯ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸ್ಪೋಟಕ ವಸ್ತುಗಳನ್ನು ಬಳಸಿ ಭಾರೀ ಪ್ರಮಾಣದ ಬಂಡೆಗಳನ್ನು ಸ್ಪೋಟಿಸಿ ತಾಲೂಕಿನಲ್ಲಿ ಎಗ್ಗಿಲ್ಲದೇ ಕಲ್ಲುಗಣಿಗಾರಿಕೆ ನಡೆಸುವ ಅಕ್ರಮ ಕಲ್ಲು ಗಣಿಗಾರಿಕೆಯ ಬೀಡಾಗಿದೆ. ಹೀಗೆ ಈ ಪ್ರದೇಶಗಳಲ್ಲಿ ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಸಿಡಿಮದ್ದುಗಳನ್ನು ಸಿಡಿಸುತ್ತಿರುವದರಿಂದ ಮುಂದಿನ ದಿನಮಾನಗಳಲ್ಲಿ ವಿದೇಶೀ ವಲಸೆ ಪಕ್ಷಿಗಳು ಕಣ್ಮರೆಯಾದರೆ ಆಶ್ಚರ್ಯಪಡಬೇಕಾಗಿಲ್ಲ.
ತಾಲೂಕಿನ ಶಿರಹಟ್ಟಿ, ಮಾಗಡಿ, ಅಕ್ಕಿಗುಂದ, ಪರಸಾಪೂರ, ಹೊಳಲಾಪೂರ, ಸೋಗಿಹಾಳ, ಛಬ್ಬಿ, ಶಿವಾಜಿನಗರ, ಅಡ್ರಕಟ್ಟಿ ಇನ್ನು ಹಲವಾರು ಗ್ರಾಮಗಳಲ್ಲಿ ಸುಮಾರು ವರ್ಷಗಳಿಂದ ಕಾನೂನು ಬಾಹೀರ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಸರಕಾರದ ಕಣ್ಣಿಗೆ ಮಣ್ಣೆರಚಿ ಕೋಟ್ಯಂತರ ರೂಪಾಯಿ ತೆರಿಗೆಯನ್ನು ವಂಚಿಸುತ್ತಿದ್ದಾರೆಂದು ಪ್ರಜ್ಞಾವಂತರ ಅಳಲಾಗಿದೆ.
ಸುಮಾರು ಶೇ 80 ರಷ್ಟು ಮಾಲೀಕರು ಕಾನೂನು ಬಾಹೀರ ಹಾಗೂ ಅಕ್ರಮವಾಗಿ ತಾಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆಯಲ್ಲಿ ನಿರತರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಭೂಪರಿವರ್ತನೆ ಮಾಡದೇ ರೈತರ ಹೊಲದಲ್ಲಿ ಅಕ್ರಮ ಕ್ರಷರ್ಗಳನ್ನು ಹಾಕಿ, ಅಕ್ಕ-ಪಕ್ಕದ ಜಮೀನಿನ ಮಾಲೀಕರಿಗೆ ಹಣದ ಆಮಿಷ ತೋರಿಸಿ ಅಲ್ಪ ಪ್ರಮಾಣದ ದುಡ್ಡು ಕೊಟ್ಟು, ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯ ಮಾಲೀಕರ ಬೆಂಬಲಕ್ಕೆ ಕೆಲವು ಪ್ರಭಾವಿ ರಾಜಕೀಯ ವ್ಯಕ್ತಿಗಳು ಕಂಕಣ ಬದ್ದವಾಗಿ ನಿಂತಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕರಲ್ಲಿ ಹರಿದಾಡುತ್ತಿವೆ.
ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಬಳಸಿ ದೊಡ್ಡ ದೊಡ್ಡ ಬಂಡೆಗಳನ್ನು ಸ್ಪೋಟಿಸುವದರಿಂದ ಬೋರ್ವೆಲ್ಗಳಲ್ಲಿ ನೀರು ಕಡಿಮೆಯಾಗುತ್ತಿವೆ. ಸರ್ಕಾರದ ನಿಯಮಾನುಸಾರವಾಗಿ ಒಂದು ಕ್ರಷರ್ ಯಂತ್ರ ಮುಖ್ಯ ರಸ್ತೆಯಿಂದ ಕನಿಷ್ಠ 200-300 ಮೀಟರ್ ಅಂತರದಲ್ಲಿಬೇಕು ಹಾಗೂ ಆ ಕ್ರಷರ್ ಯಂತ್ರದಿಂದ ಆಗುವ ಅಲ್ಲಿನ ಧೂಳು ಹಾಗೂ ಕಲ್ಲಿನ ತುಣುಕುಗಳು ಪಕ್ಕದ ರೈತರ ಕೆಲಸಗಳಿಗೆ ತೊಂದರೆಯಾಗದಂತೆ ಸುತ್ತಲೂ ಎತ್ತರದ ಕವಚಗಳಿಂದ ಸುರಕ್ಷತೆ ಮಾಡಿಕೊಳ್ಳಬೇಕು ಹಾಗೂ ನಿದರ್ಿಷ್ಟ ಪಡಿಸಿದ ಸಮಯದಲ್ಲಿ ಮಾತ್ರ ಪರಿವಾನಿಗೆ ಪಡೆದು ಬ್ಲಾಸ್ಟಿಂಗ್ ಮಾಡಬೇಕು ಎಂಬ ನಿಯಮವಿದ್ದು ಈ ನಿಯಮಗಳಿಗೆ ಕ್ಯಾರೇ ಎನ್ನದೇ ಕ್ರಷರ್ ಮಾಲೀಕರು ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಇದ್ದುದರಿಂದ ಇಂದು ಬ್ಲಾಸ್ಟಿಂಗ್ ಧೂಳಿನಿಂದ ರೈತರ ಭೂಮಿಯ ಫಲವತ್ತತೆ ಕ್ಷೀಣಿಸುತ್ತಿದ್ದರಿಂದ ಮೊದಲೇ ಬರಗಾಲದಿಂದ ತತ್ತರಿಸುತ್ತಿರುವ ರೈತರ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿರುವುದು ಎಂತ ವಿಪಯರ್ಾಸದ ಸಂಗತಿ ಅಲ್ಲವೇ?
ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಅಕ್ರಮ ಗಣಿಗಾರಿಕೆಯ ದಂಧೆಕೋರರು ರಾಜಾರೋಷವಾಗಿ, ಸರಕಾರಕ್ಕೆ ಮೋಸ ಮಾಡಿ ಭಾರೀ ಪ್ರಮಾಣದ ಕುಳಗಳಾಗಿದ್ದಾರೆ. ಇದರಿಂದ ಪರಿಸರ ನಾಶವಾಗಿ, ರೈತರ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇಷ್ಟೆಲ್ಲ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸಹ ಮೌನವಾಗಿರುವುದಕ್ಕೆ ಹಲವು ಅನುಮಾನಗಳು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿವೆ. ಕೆಲ ವರ್ಷಗಳ ಹಿಂದೆ ಬಳ್ಳಾರಿ ಎಂದರೆ ಸಾಕು, ಕಬ್ಬಿಣದ ಅದಿರಿಗೆ ಹೆಸರುವಾಸಿಯಾಗಿತ್ತು. ಆಗ ಸಾಕಷ್ಟು ಪ್ರಮಾಣದ ಭೂಮಿಗಳಲ್ಲಿ ಅಕ್ರಮವಾಗಿ ಅದಿರನ್ನು ತೆಗೆದು ವಿದೇಶಗಳಿಗೆ ಕಳಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಾನೂನು ಬಾಹೀರವಾಗಿ ಹಾಗೂ ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಇಲ್ಲಿಯ ಕೆಲವರು ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಯಾಗಿ ಪೋಲೀಸರ ಅತಿಥಿಯಾಗಿ, ಅಲ್ಲಿನ ಮುದ್ದೆ ತಿಂದು ಬಂದಿರುವುದು ಜಗಜ್ಜಾಹೀರಾಗಿದೆ.
ಅದೇ ರೀತಿ ಶಿರಹಟ್ಟಿ ತಾಲೂಕಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರು ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ದಂಧೆಕೋರರು ಕೋಟ್ಯಾಧೀಶರಾಗಿದ್ದಾರೆ. ಇಂತಹ ಅಕ್ರಮ ದಂಧೆಕೋರರ ವಿರುದ್ಧ ಕಾನೂನು ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.