ಉಪ ಚುನಾವಣೆಯಲ್ಲಿ ಸೋಲಾದರೆ ಮಂತ್ರಿಯಾಗಿ ಮುಂದುವರೆಯುವುದು ಕಷ್ಟವಾದೀತು: ಯಡಿಯೂರಪ್ಪ

bsy

ಬೆಂಗಳೂರು, ನ 20: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಿಜೆಪಿ ಸರ್ಕಾರದ ಅಳಿವು - ಉಳಿವು ನಿರ್ಧರಿಸಲಿದ್ದು, ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. 

ತಮ್ಮ ನೇತೃತ್ವದಲ್ಲಿ ನಡೆದ ಸಚಿ ಸಂಪುಟ ಸಭೆಯಲ್ಲಿ ಎಲ್ಲರೂ ಸಂಘಟಿತರಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಸೂಚಿಸಿದ್ದಾರೆ. ಮುಂದಿನ ಎರಡು ವಾರಗಳ ಕಾಲ ತಮಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕು. ಇಲ್ಲವಾದಲ್ಲಿ ತಲೆ ದಂಡಕ್ಕೆ ಸಿದ್ಧರಾಗಿ ಎಂದು ಸಹ ಯಡಿಯೂರಪ್ಪ ಕಟುವಾಗಿಯೇ ಹೇಳಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸರ್ಕಾರ ರಚಿಸಲು ಕಾರಣರಾದ ಅನರ್ಹ ಶಾಸಕರನ್ನು ಗೆಲ್ಲಿಸಿಕೊಂಡು ಬಂದು ಅವರ ಋಣ ತೀರಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಏನೇನು ತಂತ್ರ ಅನುಸರಿಸುತ್ತೀರೋ ಗೊತ್ತಿಲ್ಲ. ಎಲ್ಲವನ್ನೂ ಬಳಸಿ, ಎಲ್ಲರನ್ನೂ ಗೆಲ್ಲಿಸಿಕೊಂಡು ಬನ್ನಿ ಎಂದಿದ್ದಾರೆ. 

ಬಿಜೆಪಿ ಸರ್ಕಾರದ ಭವಿಷ್ಯ ತಮ್ಮ ಕೈಯಲ್ಲಿದೆ. ಹಾಗೆಂದು ಅಸಹಾಯಕನಾಗಿ ಈ ಮಾತು ಹೇಳುತ್ತಿಲ್ಲ. ಇದೀಗ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಅಸಮಾಧಾನಗೊಂಡಿರುವವರನ್ನು ಸಮಾಧಾನಪಡಿಸಿ, ಬೇರೆ ಬೇರೆ ಪಕ್ಷಗಳ ಮುಖಂಡರ ಸಹಾಯ ಪಡೆದುಕೊಳ್ಳಿ. ತಂತ್ರಗಾರಿಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನಿಮಗೆ ಕೊಟ್ಟಿದ್ದು, ಚುನಾವಣೆ ಮುಗಿಯುವ ತನಕ ಕ್ಷೇತ್ರ ಬಿಟ್ಟು ಬರಬೇಡಿ ಎಂದು ಹೇಳಿದ್ದಾರೆ. 

ಪಕ್ಷದ ಹೈಕಮಾಂಡ್ ಕೃಪೆಯಿಂದ ನಾವು ಅಧಿಕಾರ ಅನುಭವಿಸುತ್ತಿದ್ದೇವೆ. ಇನ್ನೂ ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರೆಯಲು ಈ ಚುನಾವಣೆಯ ಫಲಿತಾಂಶ ಮಹತ್ವದ್ದಾಗಿದೆ. ಎದುರಾಳಿಗಳನ್ನು ದುರ್ಬಲಗೊಳಿಸಿ, ಸಣ್ಣ ಪುಟ್ಟ ಸಮುದಾಯದವರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಗೆಲ್ಲಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಿ. ಎಚ್ಚರಿಕೆಯಿಂದ ಮಾತನಾಡಿ, ಮತದಾರರ ಮನ ಗೆಲ್ಲಲು ಪ್ರಯತ್ನಿಸಿ ಎಂದು ಯಡಿಯೂರಪ್ಪ ಸಂಪುಟ ಸದಸ್ಯರಿಗೆ ಸಲಹೆ ಮಾಡಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.