ಆಪರೇಷನ್ ಕಮಲ ಮುಂದುವರೆದರೆ ಜನರೇ ತಿರುಗಿಬೀಳುತ್ತಾರೆ: ದಿನೇಶ್ ಗುಂಡೂರಾವ್

Dinesh Gundurao

ಬೆಂಗಳೂರು,  ಡಿ. 3 - ಬಿಜೆಪಿಯವರು ಆಪರೇಷನ್ ಕಮಲವನ್ನು ಮುಂದುವರೆಸಿದರೆ ಜನರೇ ಅವರನ್ನು  ಬೆನ್ನತ್ತಿ ಹೊಡೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ  ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌ , ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಆಗ ಯಾವ  ಸರ್ಕಾರ ಬರುತ್ತದೆ ಎನ್ನುವುದು ಮುಖ್ಯವಲ್ಲ ಜನರು ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು  ತಿರಸ್ಕರಿಸುವುದರಿಂದ ಈ ಸರ್ಕಾರ ಬೀಳುತ್ತದೆ. ಬಿಜೆಪಿಯನ್ನು ಸೋಲಿಸುವುದನ್ನೇ ನಮ್ಮ  ಗುರಿಯಾಗಿ ಇಟ್ಟುಕೊಂಡಿದ್ದೇವೆ. ಫಲಿತಾಂಶ ಬಂದ ನಂತರ ಏನಾಗುತ್ತದೆ ಈಗಲೇ ಹೇಳುವುದಿಲ್ಲ. ಈ  ಚುನಾವಣೆ ಮುಗಿದ ಮೇಲೆ ಬಿಜೆಪಿಗೆ ಬಹುಮತ ಇರುವುದಿಲ್ಲ ಎಂದು ಭವಿಷ್ಯ ನುಡಿದರು.

ರಾಜ್ಯದ  ಇತಿಹಾಸದಲ್ಲಿ ಈ ರೀತಿಯ ಚುನಾವಣೆ ನಡೆದಿರಲಿಲ್ಲ. 2008ರಲ್ಲಿ ಬಿಜೆಪಿಯವರು ಆಪರೇಷನ್  ಕಮಲ ಆರಂಭಿಸಿದ್ದರು. ಆಗ ಕೆಲವು ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದವು. ಈಗ ಮೈತ್ರಿ  ಸರ್ಕಾರವನ್ನು ಪತನಗೊಳಿಸಲು ಜನ ರಾಜೀನಾಮೆ ನೀಡಿ ಚುನಾವಣೆ ನಡೆಯುತ್ತಿರುವುದು ಇದೆ  ಮೊದಲ ಬಾರಿಗೆ ಎಂದರು.

ಮೈತ್ರಿ ಸರಕಾರವನ್ನು ಸ್ವತಃ  ಕೆಡವಿರುವುದಾಗಿ ಅನರ್ಹರು  ಹಾಗು ಬಿಜೆಪಿ ನಾಯಕರೇ ಹೇಳಿಕೊಂಡಿದ್ದಾರೆ. ಸ್ಪೀಕರ್, ಸುಪ್ರೀಂ ಕೋರ್ಟ್, ಆಯೋಗ  ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದು ಅವರನ್ನು ರಾಜೀನಾಮೆ ಕೊಡಿಸಿ ಸರ್ಕಾರ ರಚನೆ  ಮಾಡಿದ್ದಾರೆ. ಈ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾಗಿದೆ ಆದರೂ ಯಾವುದೇ ರೀತಿಯ ಸ್ಪಂದನೆ  ದೊರೆತಿಲ್ಲ. ಶತಮಾನದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿದ್ದರೂ ಯಾವುದೇ  ಪರಿಹಾರ ನೀಡಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡಲಿಕ್ಕಾಗಿಯೇ ಹಣ ಖರ್ಚು ಮಾಡಿದ್ದರು.  ಅನರ್ಹ ಶಾಸಕರ ಖರ್ಚು ವೆಚ್ಚ, ಮುಂಬೈನಲ್ಲಿ ಫೈ ಸ್ಟಾರ್ ಹೊಟೆಲ್ ನಲ್ಲಿ ವಾಸ್ತವ್ಯ  ಸ್ಪೆಷಲ್ ಫ್ಲೈಟ್  ವ್ಯವಸ್ಥೆ ಮಾಡಿದ್ದು ಎಲ್ಲವೂ ಸೆರಿ ಸುಮಾರು ಒಂದು ಸಾವಿರ ಕೋಟಿ  ಕಪ್ಪು ಹಣ ಖರ್ಚು ಮಾಡಿದ್ದಾರೆ. ಆದರೆ ಇವರಿಗೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ  ಇದ್ದಾಗ  ಸಮಯ, ದುಡ್ಡು ಇರಲಿಲ್ಲ. ಈಗ ಚುನಾವಣೆಯಲ್ಲಿ ಸಚಿವರು ಶಾಸಕರು ಅಲ್ಲಿಯೇ ತಳ  ಊರಿ ಕುಳಿತುಕೊಂಡಿದ್ದಾರೆ ಎಂದು ಟೀಕೆ ಮಾಡಿದರು.

ದೇಶದಲ್ಲಿ ಕಾನೂನು ಬಾಹಿರ  ಚಟುವಟಿಕೆಗಳು ಹೆಚ್ಚಾಗುತ್ತಿವೆ. ರಾಷ್ಟ್ರಪತಿ ಭವನದಿಂದ ಹಿಡಿದು ಎಲ್ಲವೂ ದುರುಪಯೋಗ  ಆಗುತ್ತಿವೆ. ಅನರ್ಹ ಬಿಜೆಪಿ ಅಭ್ಯರ್ಥಿ  ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಪ್ರತಿ ಮತದಾರರಿಗೆ  ಎರಡು ರೂಪಾಯಿ ನೀಡುತ್ತಿದ್ದಾರೆ. ದುಡ್ಡಿನಿಂದ ಮಾತ್ರ ಚುನಾವಣೆ ಗೆಲ್ಲಬಹುದು ಎಂದು  ಬಿಜೆಪಿಯವರು ಅಂದುಕೊಂಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 50 ಕೋಟಿ  ರೂ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಹುಣಸೂರಿನಲ್ಲಿ ಸೀರೆ ಸಿಕ್ಕಿದೆ. ಉಪ ಮುಖ್ಯಮಂತ್ರಿ  ಗೋವಿಂದ ಕಾರಜೋಳ ಹಣ ಹಂಚಿದ್ದಾರೆ. ಗೃಹ ಸಚಿವರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆಗೆ  ನಿಲ್ಲಿಸದೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಆದರೆ ಪೇದೆ ಮತ್ತು ಡ್ರೈವರ್ ಮೇಲೆ  ಕ್ರಮ ಕೈಗೊಂಡಿದ್ದಾರೆ. 

ಯಡಿಯೂರಪ್ಪ ವೀರಶೈವ ಮತ ಹಾಕಬೇಕು ಎನ್ನುತ್ತಾರೆ.  ಲಿಂಗಾಯತರಿಗೇನು ಸ್ವಾಭಿಮಾನ ಇಲ್ಲವೇ ಎಂದು ಹೇಳಿದ ದಿನೇಶ್ ಗುಂಡೂರಾವ್, ಬಿಜೆಪಿಯ  ಎಲ್ಲ ಅಕ್ರಮಗಳನ್ನು ಸಹಿಕೊಂಡು ಬೆಂಬಲಿಸಲು ಅವರು ಇವರು ಹೇಳಿದಂತೆ ಕೇಳಬೇಕೇ.  ಮಾಧುಸ್ವಾಮಿ ಲಿಂಗಾಯತರು ಬಿಜೆಪಿಗೆ ಮತ ಹಾಕದಿದ್ದರೆ ಯಡಿಯೂರಪ್ಪ ಕೆನ್ನೆಗೆ  ಹೊಡೆದಂತೆ ಎಂದು ಹೇಳಿದ್ದಾರೆ. ಹೀಗಾಗಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಯಡಿಯೂರಪ್ಪ  ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರು ನೀಡುತ್ತೇವೆ. ಇಬ್ಬರೂ ನಾಯಕರು ಲಿಂಗಾಯತ  ಸಮುದಾಯದ ಮಠಾಧೀಶರು ಕ್ಷಮೆ ಕೋರಬೇಕು. ಇದು ಒಂದು ಸಮಾಜದ ಪ್ರಶ್ನೆಯಲ್ಲ. ಎಲ್ಲ  ಸಮುದಾಯಗಳು ಅನರ್ಹರನ್ನು ತಿರಸ್ಕರಿಸುತ್ತವೆ. ಈ ರೀತಿಯ ನಾಯಕರು ಜೈಲಿಗೆ  ತಳ್ಳಬೇಕು. ಕನಿಷ್ಠ ಮೂರು ವರ್ಷ ಜೈಲು ಶಿಕ್ಷೆಯಾಗಬೇಕು. ಇದರ ವಿರುದ್ಧ ಕಾನೂನು ಹೋರಾಟ  ನಡೆಸುವುದಾಗಿ ದಿನೇಶ್ ಗುಂಡೂರಾವ್ ಎಚ್ಚರಿಸಿದರು.

ರಾಜ್ಯಸಭೆ ಚುನಾವಣೆ ನಮ್ಮ  ಬಳಿ ಇರುವ ಸಂಖ್ಯಾಬದಲ್ಲಿ ಗೆಲ್ಲಲು ಆಗುತ್ತಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಅನರ್ಹರು ಕೆಲವರು ಕಾಂಗ್ರೆಸ್ ಗೆ ವಾಪಸ್ ಬರಲು ಸಿದ್ಧರಿದ್ದರು, ಆದರೆ ನಾವೇ ಸೇರಿಸಿಕೊಂಡಿಲ್ಲ. ಎಸ್.ಟಿ.ಸೋಮಶೇಖರ್,  ಬೈರತಿ ಬಸವರಾಜ್ ಹಾಗೂ ಮುನಿರತ್ನ  ಬೇರೆ ನಾಯಕರ ಮೂಲಕ ಪ್ರಯತ್ನ ನಡೆಸಿದ್ದರು. ಈಗ ಆ  ನಾಯಕರೇ ಚೂರಿ ಹಾಕಿ ಹೋಗಿದ್ದಾರೆ. ಹೀಗಾಗಿ ಮತ್ತೆ ನಾವು ಅವರನ್ನು ಸೆರಿಸಿಕೊಂಡಿಲ್ಲ.  ಬಿಜೆಪಿಯವರು ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ದಿನೇಶ್ ಗುಂಡೂರಾವ್  ಸ್ಪಷ್ಟಪಡಿಸಿದರು.