ನವದೆಹಲಿ, ನವೆಂಬರ್ 25: ದೆಹಲಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಸ್ಸಾಂ , ಮತ್ತು ದೆಹಲಿಯಲ್ಲಿ ದಾಳಿ ನಡೆಸುವ ಸಂಚು ಮಾಡಿದ್ದ ಐಸಿಸ್ ನಿಂದ ಪ್ರಭಾವಿರಾಗಿದ್ದ ಮೂವರು ಉಗ್ರರನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.
ಬಂಧಿತ ಉಗ್ರರಿಂದ ಸುಧಾರಿತ ಸ್ಫೋಟಕ ವಸ್ತು(ಐಇಡಿ) ಹಾಗೂ ನಿಷೇಧಿತ ಸಾಹಿತ್ಯ ಹಾಗೂ ಇನ್ನಿತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಈ ಮೂಲಕ ಭಾರೀ ಅನಾಹುತ ತಪ್ಪಿಸಿದಂತಾಗಿದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಬಂಧಿತರು ಐಸಿಸ್ ನಿಂದ ಪ್ರಭಾವಿರಾಗಿದ್ದು, ಅಸ್ಸಾಂನ ರಾಮ್ ಮೇಳದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ತಿಳಿದು ಬಂದಿದೆ ಅಸ್ಸಾಂ ನಂತರ ದೆಹಲಿಯಲ್ಲಿ ದಾಳಿ ನಡೆಸುವ ಉದ್ದೇಶ ಹೊಂದಿರುವ ವಿಚಾರವೂ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಘಟನೆಯನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ನ ಡಿಸಿಪಿ ಪ್ರಮೋದ್ ಕುಶ್ವಾಹಾ ಅವರು ಖಚಿತಪಡಿಸಿದ್ದು, ಐಇಡಿ ಸ್ಫೋಟಕದ ಜತೆ ಮೂವರು ಉಗ್ರರನ್ನು ಬಂಧಿಸಿದ್ದರಿಂದ ಉಗ್ರರ ದಾಳಿ ಸಂಚು ವಿಫಲಗೊಳಿಸಿದಂತಾಗಿದೆ ಎಂದೂ ಹೇಳಿದ್ದಾರೆ.
ಅಸ್ಸಾಂನ ಗೋಲಾಪಾರಾ ನಿವಾಸಿಗಳಾದ ರಂಜಿತ್ ಅಲಿ, ಇಸ್ಲಾಂ ಹಾಗೂ ಜಮಾಲ್ ಸೇರಿ ಮೂವರನ್ನು ಬಂಧಿಸಲಾಗಿದೆ. ಮೂವರು ದೆಹಲಿಯಲ್ಲಿ ಕೆಲವರ ಜತೆ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಪರ್ಕ ಹೊಂದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.