ನವದೆಹಲಿ, ಡಿ ೦೪- ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ, ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಆರ್ ಭಾನುಮತಿ ನೇತೃತ್ವದ ನ್ಯಾಯಪೀಠವು ಎರಡು ಸ್ಯೂರಿಟಿ ಹಾಗೂ ೨ ಲಕ್ಷ ರೂಪಾಯಿಗಳ ಬಾಂಡ್‌ನೊಂದಿಗೆ ಚಿದಂಬರಂ ಅವರಿಗೆ ಜಾಮೀನು ನೀಡಿದೆ.
ನ್ಯಾಯಾಲಯದ ಅನುಮತಿಯಿಲ್ಲದೆ ಚಿದಂಬರಂ ಅವರು ದೇಶದ ಹೊರಗೆ ಪ್ರಯಾಣಿಸಲು ಸಾಧ್ಯವಿಲ್ಲ ಮತ್ತು ಸಾರ್ವಜನಿಕ ಹೇಳಿಕೆಗಳನ್ನು ನೀಡಲು ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಸಂದರ್ಶನಗಳನ್ನು ನೀಡುವಂತಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.
ಪ್ರಕರಣದ ಸಾಕ್ಷಿಗಳೊಂದಿಗೆ ಸಂಪರ್ಕದಲ್ಲಿರಬಾರದು ಎಂದೂ ಸಹ ನ್ಯಾಯಪೀಠ ಉಲ್ಲೇಖಿಸಿದ್ದು, ಜಾರಿ ನಿರ್ದೇಶನಾಲಯಕ್ಕೆ ಅವಶ್ಯವಿದ್ದಾಗ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.
ಪಿ ಚಿದಂಬರಂ ಅವರು ೨೦೦೭ರಲ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಐಎನ್‌ಎಕ್ಸ್ ಮೀಡಿಯಾಕ್ಕೆ ೩೦೫ ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಗೆ ವಿದೇಶಿ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿಯ ಅನುಮೋದನೆ ದೊರಕಿತ್ತು. ಹಾಗೂ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇರೆಗೆ ಚಿದಂಬರಂ ಈ ಅನುಮೋದನೆ ನೀಡಿದ್ದಾರೆಂಬ ಆರೋಪವಿದೆ.
ಈ ಆರೋಪಕ್ಕೆ ಸಂಬಂಧಿಸಿ ಕಳೆದ ಆಗಸ್ಟ್ ೨೧ ರಂದು ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು, ತಿಹಾರ್ ಜೈಲು ಸೇರಿದ್ದ ಚಿದಂಬಂರಂ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ ೨೮ರಂದು ಕಾಯ್ದಿರಿಸಿ ಇಂದು ಅಂತಿಮ ತೀರ್ಪು ನೀಡಿದೆ. ೧೦೫ ದಿನಗಳ ಬಳಿಕ ಚಿದಂಬರಂ ನಿಟ್ಟುಸಿರು ಬಿಡುವಂತಾಗಿದೆ.