ಬಡಮಕ್ಕಳ, ಸರ್ಕಾರಿ ಶಾಲೆಯ ಏಳಿಗೆಗಾಗಿ ಅವಿರತ ಶ್ರಮಿಸುತ್ತೇನೆ: ಖಾದ್ರಿ

I will work tirelessly for the progress of poor children and government schools: Qadri

ಬಡಮಕ್ಕಳ, ಸರ್ಕಾರಿ ಶಾಲೆಯ ಏಳಿಗೆಗಾಗಿ ಅವಿರತ ಶ್ರಮಿಸುತ್ತೇನೆ: ಖಾದ್ರಿ  

ದೇವರಹಿಪ್ಪರಗಿ 22: ನಾನು ಸೇವೆಯಿಂದ ನಿವೃತ್ತನಾದರೂ ಕೂಡಾ ಸುಮ್ಮನೆ ಕುಳಿತುಕೊಳ್ಳದೇ ಮಕ್ಕಳಿಗೆ ಎಂದಿನಂತೆ ಅಕ್ಷರಾಭ್ಯಾಸ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ. ಬಡಮಕ್ಕಳ ಹಾಗೂ ಸರ್ಕಾರಿ ಶಾಲೆಯ ಏಳಿಗೆಗಾಗಿ ಯಾವುದೇ ಫಲಾಪೇಕ್ಷೆ ಬಯಸದೇ ಅವಿರತವಾಗಿ ಶ್ರಮಿಸುತ್ತೇನೆ ಎಂದು ನಿವೃತ್ತ ಶಿಕ್ಷಕ ಎಮ್ ಎಚ್ ಖಾದ್ರಿ ಅವರು ಹೇಳಿದರು.  

ತಮ್ಮ ಸೇವಾನಿವೃತ್ತಿಯ ಪ್ರಯುಕ್ತ ತಾಲೂಕಿನ ಪಡಗಾನೂರ ಎಲ್ ಟಿ ಶಾಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ನಾನು ಸೇವೆ ಸಲ್ಲಿಸಿದ ಎಲ್ಲಾ ಶಾಲೆಗಳಲ್ಲೂ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ ಎಂದು ಹೇಳಿದರು. ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಚ್ ವಾಲೀಕಾರ ಹಾಗೂ ಯುವ ಮುಖಂಡರಾದ ಬಾಳು ರಾಠೋಡ ಅವರು ಮಾತನಾಡಿ ಎಮ್ ಎಚ್ ಖಾದ್ರಿ ಗುರುಗಳ ಆದರ್ಶಮಯ ವ್ಯಕ್ತಿತ್ವವು ಸರ್ವರಿಗೂ ಮಾದರಿಯಾಗಿದ್ದು, ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಕಸಾಪ ಅಧ್ಯಕ್ಷ ಜಿ ಪಿ ಬಿರಾದಾರ, ಯುವ ಮುಖಂಡ ರಾಜು ಸಿಂಧಗೇರಿ, ನಾಗೇಶ ನಾಗೂರ, ಸಿಂದಗಿ ಸರ್, ವಾಯ್ ಜಿ ತಾವರಖೇಡ ಅವರು ಮಾತನಾಡಿದರು. ಮಕ್ಕಳು ಖಾದ್ರಿ ಗುರುಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು. ದಂಪತಿ ಸಮೇತವಾಗಿ ನಿವೃತ್ತ ಶಿಕ್ಷಕರನ್ನು ಹಾಗೂ ಶಾಲೆಗೆ ಹೊಸದಾಗಿ ಬಂದಿರುವ ಜಾನು ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯಗುರು ಎಸ್ ಪಿ ಇಂಗಳೇಶ್ವರ, ಎಸ್‌ಡಿಎಮ್‌ಸಿ ಅಧ್ಯಕ್ಷ ಗಣೇಶ ರಾಠೋಡ, ಶಿಕ್ಷಕ ಸಂಘದ ಕಾರ್ಯದರ್ಶಿ ಪಿ ಸಿ ತಳಕೇರಿ, ದಾನು ರಾಠೋಡ, ಜಿ ಎಮ್ ಗುಡಿಮನಿ, ಶ್ರೀಕಾಂತ ರಾಠೋಡ, ಎನ್ ಎಸ್ ಹಿರೇಮಠ, ಎ ಟಿ ಲಮಾಣಿ, ಶೃತಿ ಪಾಟೀಲ, ಅಮೃತಾ ಕರಾಬಿ, ಕವಿತಾ ಬ್ಯಾಳಿ, ಮಲ್ಲಿಕಾರ್ಜುನ ತಳಕೇರಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಗುರುಮಾತೆಯರು, ತಾಂಡಾದ ಪ್ರಮುಖರು, ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.